ಬೆಳಗಾವಿ: ಅಪ್ರಾಪ್ತ ಬಾಲಕಿಯನ್ನು ಮದುವೆ ಆಗುವುದಾಗಿ ನಂಬಿಸಿ ನಿರಂತರ ಲೈಂಗಿಕವಾಗಿ ಬಳಸಿಕೊಂಡು, ಮಗು ಹೆರಲು ಕಾರಣವಾದ ಯುವಕನನ್ನು ಖಾನಾಪುರ ಪೊಲೀಸರು ಬಂಧಿಸಿದ್ದಾರೆ.
ಖಾನಾಪುರ ತಾಲ್ಲೂಕಿನ ಗೌಳಿವಾಡ ಗ್ರಾಮದ ಮಲ್ಲು ಅಪ್ಪು ಪಿಂಗಳೆ (19) ಬಂಧಿತ.16 ವರ್ಷದ ಬಾಲಕಿಯನ್ನು ಪುಸಲಾಯಿಸಿ, ಕೆಲ ವರ್ಷಗಳಿಂದ ಲೈಂಗಿಕವಾಗಿ ಬಳಸಿಕೊಂಡಿದ್ದಾನೆ. ಪರಿಣಾಮ ಬಾಲಕಿ ಗಂಡುಮಗುವಿಗೆ ಜನ್ಮ ನೀಡಿದ್ದಾಳೆ. ಆರೋಪಿ ಮೇಲೆ ‘ಪೋಕ್ಸೊ’ ಅಡಿ ಅತ್ಯಾಚಾರ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಗೌಳಿವಾಡ ಗ್ರಾಮ ಹೊರವಲಯದಲ್ಲಿ ಆಗಸ್ಟ್ 25ರಂದು ಮರಕ್ಕೆ ನೇತು ಹಾಕಿದ ಪ್ಲಾಸ್ಟಿಕ್ ಚೀಲದಲ್ಲಿ ಹಸುಳೆಯೊಂದು ಪತ್ತೆಯಾಗಿತ್ತು. ಗ್ರಾಮದ ಆಶಾ ಕಾರ್ಯಕರ್ತೆ ಸತ್ಯವತಿ ದೇಸಾಯಿ ಎನ್ನುವವರು, ಮಗು ಅಳುವ ಶಬ್ದ ಕೇಳಿ ಅದನ್ನು ರಕ್ಷಿಸಿದ್ದರು. ಆಂಬುಲೆನ್ಸ್ ಮೂಲಕ ಹಸುಳೆಯನ್ನು ಖಾನಾಪುರ ತಾಲ್ಲೂಕು ಆಸ್ಪತ್ರೆಗೆ ದಾಖಲಿಸಿದ್ದರು. ಸದ್ಯ ಹಸುಳೆಗೆ ಜಿಲ್ಲಾಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಮುಂದುವರಿಸಲಾಗಿದೆ. ಪ್ರಕರಣ ಭೇದಿಸಿದ ಖಾನಾಪುರ ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಿದಾಗೆ ಆರೋಪಿ 16 ವರ್ಷದ ಬಾಲಕಿಯ ಜೊತೆಗೆ ಬೆಳೆಸಿದ ಸಂಬಂಧದ ಕಾರಣ ಮಗು ಜನಿಸಿದ್ದಾಗಿ ಒಪ್ಪಿಕೊಂಡಿದ್ದಾನೆ.