ಸಿದ್ದರಾಮಯ್ಯ ಜೊತೆ ಗುರುತಿಸಿಕೊಂಡಿರುವುದಕ್ಕೆ ರಾಜಕೀಯ ಪಿತೂರಿ: ಡಿ.ಕೆ. ಶಿವಕುಮಾರ್ ವಿರುದ್ಧ ಬಂಡಾಯ ಸಾರಿದ ಮಾಜಿ ಸಚಿವ ಎಂ.ಆರ್. ಸೀತಾರಾಂ

Prasthutha|

ಬೆಂಗಳೂರು: ಜೂ, 23; ಮಾಜಿ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ಶಾಸಕಾಂಗ ನಾಯಕ ಸಿದ್ದರಾಮಯ್ಯ ಅವರೊಂದಿಗೆ ಗುರುತಿಸಿಕೊಂಡಿರುವ ತಮ್ಮ ವಿರುದ್ಧ ಪಕ್ಷದ ವರಿಷ್ಠರ ಮಟ್ಟದಲ್ಲಿ ರಾಜಕೀಯ ಪಿತೂರಿ ಮಾಡುತ್ತಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವಿರುದ್ಧ ಮಾಜಿ ಸಚಿವ ಎಂ.ಆರ್. ಸೀತಾರಾಂ ಬಹಿರಂಗ ಬಂಡಾಯ ಸಾರಿದ್ದಾರೆ.

- Advertisement -

ನಗರದ ಅರಮನೆ ಮೈದಾನದ ವೈಟ್ ಪೆಟಲ್ಸ್ ಗಾರ್ಡೇನಿಯಾದಲ್ಲಿ ಶುಕ್ರವಾರ ಬೆಳಿಗ್ಗೆ 11 ಗಂಟೆಗೆ ತಮ್ಮ ಬೆಂಬಲಿಗರ ಸಭೆ ಕರೆದಿರುವ ಎಂ.ಆರ್. ಸೀತಾರಾಂ, ಪಕ್ಷದಲ್ಲಿ ತಮಗಾಗಿರುವ ಅನ್ಯಾಯದ ವಿರುದ್ಧ ಬಂಡಾಯದ ಬಾವುಟ ಹಾರಿಸಲಿದ್ದಾರೆ.

“ರಾಜಕಾರಣದಲ್ಲಿ ಅಸೂಯೆ ಇರುವುದು ಸಹಜ. ಹಾಗೆಂದು ಇದು ತೀರ ಅಸಹ್ಯ ಮಟ್ಟಕ್ಕೆ ಇಳಿಯಬಾರದು. ಪ್ರತಿಯೊಬ್ಬ ಕಾರ್ಯಕರ್ತ ಮತ್ತು ಮುಖಂಡ ತಮಗಿಷ್ಟವಾದ ನಾಯಕನೊಟ್ಟಿಗೆ ಇರುವುದನ್ನು ಕೆಲವರಿಗೆ [ಡಿ.ಕೆ. ಶಿವಕುಮಾರ್] ಸಹಿಸಲು ಆಗುತ್ತಿಲ್ಲ” ಎಂದು ನೇರವಾಗಿ ತಮ್ಮ ಆಪ್ತರ ಬಳಿ ಅವರು ಅಸಮಾಧಾನ ತೋಡಿಕೊಂಡಿದ್ದಾರೆ.

- Advertisement -

ಇದೇ ಮನಸ್ಥಿತಿಯಿಂದಾಗಿ [ಡಿ.ಕೆ. ಶಿವಕುಮಾರ್] ಯುವ ಕಾಂಗ್ರೆಸ್ ಅಧ್ಯಕ್ಷ ರಕ್ಷಾ ರಾಮಯ್ಯ ಅವರಿಗೂ ಸಹ ಅನ್ಯಾಯವಾಗಿದೆ. “ ಪ್ರತಿ ದಿನ ಹಾದಿ ಬೀದಿ ಸುತ್ತಿ ಪಕ್ಷ ಕಟ್ಟುವಲ್ಲಿ ಹಗಲಿರುಳು ಶ್ರಮಿಸಿದ ಮತ್ತು ನ್ಯಾಯಯುತವಾಗಿ ಯುವ ಕಾಂಗ್ರೆಸ್ ಚುನಾವಣೆಯಲ್ಲಿ ಜಯ ಸಾಧಿಸಿದ ರಕ್ಷಾರಾಮಯ್ಯ ಅವರ ಮೂಗಿಗೆ ತುಪ್ಪ ಸವರಲಾಯಿತು. ಈಗ ಅವರ ತಂದೆಗೆ ಇಂತಹ ಪರಿಸ್ಥಿತಿ ಎದುರಾಗಿದೆ” ಎಂ.ಆರ್. ಸೀತಾರಾಂ ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

“ನಮಗಿಷ್ಟ ಬಂದ ನಾಯಕರೊಟ್ಟಿಗೆ ಇರುವುದೇ ತಪ್ಪೇ?. ಅವರನ್ನು ಬೆಂಬಲಿಸುವುದು ತಪ್ಪೇ? ಎಲ್ಲರ ಉದ್ದೇಶ ಕಾಂಗ್ರೇಸ್ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುವುದೇ ಆಗಿದೆ. ಇಂತಹ ಸತ್ಯವನ್ನು ಇವರು ಯಾಕೆ ಅರ್ಥ ಮಾಡಿಕೊಳ್ಳುತ್ತಿಲ್ಲ. ಇಂತಹ ಒಳ ದ್ವೇಷ ರಾಜಕಾರಣದಿಂದ ಇವರು ಪಡೆಯುವುದಾದರು ಏನನ್ನು” ಎಂದು ಪ್ರಶ್ನಿಸಿದ್ದಾರೆ.

ಎಂ ಆರ್ ಸೀತಾರಾಂ ಅವರು ರಾಜಕೀಯಕ್ಕೆ ಬಂದಾಗಿನಿಂದ ಮಾತ್ರ ಸಾರ್ವಜನಿಕ ಸೇವೆ ಮಾಡುತ್ತಿಲ್ಲ. ಅವರ ಇಡೀ ಕುಟುಂಬ ಸಮಾಜಸೇವೆಯಲ್ಲೇ ತಮ್ಮನ್ನು ಸಮರ್ಪಿಸಿಕೊಂಡಿದೆ. ಇಂತಹ ಒಬ್ಬ ಪ್ರಾಮಾಣಿಕ, ನಿಷ್ಕಳಂಕ ವ್ಯಕ್ತಿಯನ್ನು ರಾಜಕೀಯವಾಗಿ ಬಳಸಿಕೊಳ್ಳಲಾಗಿದೆ. ಇದೀಗ ರಾಜಕೀಯವಾಗಿ ಮೇಲೆತ್ತಬೇಕಿದ್ದವರೇ ಇವರನ್ನು ತುಳಿಯಲು ಯತ್ನಿಸುತ್ತಿರುವುದು ಎಷ್ಟರ ಮಟ್ಟಿಗೆ ಸರಿ?. ಇದು ಒಮ್ಮೆ ಯೋಚಿಸಬೇಕಾದ ವಿಷಯವಾಗಿದ್ದು, ಒಬ್ಬ ನಿಷ್ಟಾವಂತ ಜನಪರ ಕಾಂಗ್ರೆಸ್ ನಾಯಕನನ್ನು ಕಳೆದುಕೊಳ್ಳುವುದಕ್ಕಿಂತ ದುರದೃಷ್ಟಕರ ಸಂಗತಿ ಮತ್ತೊಂದಿಲ್ಲ. ಬನ್ನಿ ನಾವೆಲ್ಲರೂ ನಮ್ಮ ಸ್ನೇಹಜೀವಿಯ ಪರ ನಿಲ್ಲೋಣ ಎಂದು ಅವರ ಆಪ್ತ ಬಣ ಕರೆ ನೀಡಿದೆ.

ಎಂ.ಆರ್. ಸೀತಾರಾಂ ರಾಜಕಾರಣಕ್ಕೆ ಬಂದಾಗಿನಿಂದಲೂ ಅವರ ಜೀವನ ತೆರೆದ ಪುಸ್ತಕದಂತಿದೆ. ಭ್ರಷ್ಟಾಚಾರ ಎಂಬ ಹೇಸಿಗೆಯನ್ನು ತಮ್ಮ ಜೀವನದುದ್ದಕ್ಕೂ ತುಳಿಯದೆ ಮಾದರಿ ರಾಜಕಾರಣಿಯಾಗಿ ನಡೆದು ಬಂದವರು. ಇಂತಹ ವ್ಯಕ್ತಿಯನ್ನು ಮಾನಸಿಕವಾಗಿ ಕುಗ್ಗಿಸುವಂತಹ ಪ್ರಯತ್ನಗಳು ನಡೆಯುತ್ತಿರುವುದು ದುರದೃಷ್ಟಕರ. ನಾವೆಲ್ಲರೂ ಈಗ ನಮ್ಮ ನಾಯಕರಿಗೆ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಬೇಕಿದೆ. ಹಾಗೆಯೇ ಒಳರಾಜಕೀಯವನ್ನು ಮೆಟ್ಟಿನಿಂತು ನಮ್ಮ ಶಕ್ತಿ ಪ್ರದರ್ಶಿಸಬೇಕಿದೆ. ಬನ್ನಿ ಎಂ.ಆರ್. ಸೀತಾರಾಂ ಅವರ ಧ್ವನಿಗೆ ಧ್ವನಿಯಾಗೋಣ ಅವರ ಹೆಜ್ಜೆಗೆ ಹೆಜ್ಜೆಯಾಗೋಣ ಎಂದು ಅವರ ಆಪ್ತರು ಕರೆ ನೀಡಿದ್ದಾರೆ.

ತಮ್ಮ ಆತ್ಮೀಯರು ಮತ್ತು ಬೆಂಬಲಿಗರಿಗೆ ಬಹಿರಂಗ ಪತ್ರ ಬರೆದಿರುವ ಎಂ.ಆರ್. ಸೀತಾರಾಂ, 1984 ರ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಕಾಲದಿಂದ ಈ ವರೆಗೆ ನಡೆದು ಬಂದ ಹಾದಿ ಕುರಿತು ಮೆಲುಕು ಹಾಕಿದ್ದಾರೆ. 2008 ರಲ್ಲಿ ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರದಲ್ಲಿ ತಮಗಾದ ಒಳಸಂಚು, ವಿಶ್ವಾಸದ್ರೋಹ, ಪಕ್ಷ ದ್ರೋಹದ ಬಗ್ಗೆ ಅಸಮಾಧಾನ ತೋಡಿಕೊಂಡಿದ್ದಾರೆ. 2009 ರಲ್ಲಿ ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಲೋಕಸಭೆಗೆ ಸ್ಪರ್ಧಿಸಲು ಸೂಚಿಸಿ ಕೊನೆಗಳಿಗೆಯಲ್ಲಿ ಟಿಕೆಟ್ ನಿರಾಕರಿಸಲಾಯಿತು. 2012 ರಲ್ಲಿ ಕಾಂಗ್ರೆಸ್ ಪಕ್ಷದ ಮತಗಳು ಕಡಿಮೆ ಇದ್ದ ಸಂದರ್ಭದಲ್ಲಿ ತಮ್ಮನ್ನು ಮೇಲ್ಮನೆಗೆ ಕಣಕ್ಕಿಳಿಸಿ ಸತ್ವ ಪರೀಕ್ಷೆಗೆ ದೂಡಲಾಯಿತು. ಆದರೂ ಪ್ರಜ್ಞಾವಂತ ಶಾಸಕರ ಬೆಂಬಲದಿಂದ ಗೆದ್ದು ಬಂದೆ. 2022 ರಲ್ಲಿ ತಮ್ಮನ್ನು ವಿಧಾನಪರಿಷತ್ತಿಗೆ ಸ್ಪರ್ಧಿಸಲು ತಮ್ಮ ಹೆಸರನ್ನು ಶಿಫಾರಸ್ಸು ಮಾಡಿದ ನಂತರ ರಾತ್ರೋ ರಾತ್ರಿ ಪಿತೂರಿ ನಡೆಸಿ ತಮಗೆ ದೊರೆತಿದ್ದ ಅವಕಾಶ ಕೈ ತಪ್ಪುವಂತೆ ಮಾಡಿದ್ದಾರೆ. 1985 ರಿಂದ ನಡೆದ ಎಲ್ಲಾ ಚುನಾವಣೆಗಳಲ್ಲಿ ಹಿಂದುಳಿದ, ದಲಿತ, ಅಲ್ಪ ಸಂಖ್ಯಾತರ ಮತಗಳು ಪಕ್ಷಕ್ಕೆ ದೊರೆಯವಂತೆ ಪ್ರಯತ್ನಿಸಿದ್ದೇನೆ. ಪಕ್ಷಕ್ಕಾಗಿ ಇಷ್ಟೆಲ್ಲಾ ನಿಸ್ವಾರ್ಥ ಸೇವೆ ಸಲ್ಲಿಸಿದ್ದರೂ ಸಹ ಪಕ್ಷದಲ್ಲಿನ ಕೆಲ ಸ್ವಾರ್ಥ ಮತ್ತು ಪಟ್ಟಭದ್ರ ಶಕ್ತಿಗಳ ಕುಟಿಲ ರಾಜಕೀಯದಿಂದ ಮನನೊಂದಿದ್ದೇನೆ ಎಂದು ತೀವ್ರ ಅಸಮಾಧಾನ ತೋಡಿಕೊಂಡಿದ್ದಾರೆ.

Join Whatsapp