ಬೇಗೂರು ಕೆರೆ ಕೋಮುವಾದಿಕರಣ ಪ್ರಕರಣ|BJP ಬೆಂಬಲಿಗ ಪುನೀತ್ ಕೆರೆಹಳ್ಳಿ ಸಹಿತ ಹಲವರ ವಿರುದ್ದ FIR

Prasthutha|

ಬೆಂಗಳೂರು : ನ್ಯಾಯಾಲಯದ ಆದೇಶಗಳನ್ನು ಧಿಕ್ಕರಿಸಿ ಆಗಸ್ಟ್ 11 ರಂದು ಬೇಗೂರು ಕೆರೆಯಲ್ಲಿ ಶಿವನ ಪ್ರತಿಮೆಯನ್ನು ಅನಾವರಣಗೊಳಿಸಿದ ಬಿಜೆಪಿ ಬೆಂಬಲಿತ ಸಂಘಪರಿವಾರದ ಕಾರ್ಯಕರ್ತರ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಅಧಿಕಾರಿಗಳು ಕರ್ನಾಟಕ ಹೈಕೋರ್ಟ್‌ಗೆ ಪ್ರತಿಮೆಯನ್ನು ಮುಚ್ಚಲಾಗಿದೆ ಎಂದು ತಿಳಿಸಿದ ಕೆಲವೇ ಗಂಟೆಗಳಲ್ಲಿ ಪ್ರತಿಮೆಯನ್ನು ಅನಾವರಣಗೊಳಿಸಲಾಗಿತ್ತು. ಬೆಂಗಳೂರು ಪೊಲೀಸ್ ಆಯುಕ್ತ ಕಮಲ್ ಪಂತ್ ಅವರಿಗೆ ನೀಡಲಾಗಿದ್ದ ದೂರಿನ ಆಧಾರದ ಮೇಲೆ ಆಗಸ್ಟ್ 16 ರಂದು ಬೇಗೂರು ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

- Advertisement -

ಸಂಘಪರಿವಾರದ ಕಾರ್ಯಕರ್ತರಾದ ಪುನಿತ್ ಕೆರೆಹಳ್ಳಿ ಮತ್ತು ಸಂತೋಷ್ ಕರತಾಲ್ ಅವರ ಜೊತೆಗೆ ಇತರರ ಹೆಸರುಗಳನ್ನು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ. ಆಗಸ್ಟ್ 11 ರಂದು ಬೇಗೂರು ಕೆರೆಗೆ ಆಗಮಿಸಿದ್ದ ಆರೋಪಿಗಳು ಟಾರ್ಪಾಲ್‌‌ನಿಂದ ಮುಚ್ಚಿದ್ದ ಶಿವನ ಪ್ರತಿಮೆಯನ್ನು ಅನಾವರಣಗೊಳಿಸಿದ್ದರು.

ಅವರ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 153 ಎ (ಧರ್ಮ, ಜನಾಂಗ, ಹುಟ್ಟಿದ ಸ್ಥಳ, ವಾಸಸ್ಥಳ, ಭಾಷೆ ಇತ್ಯಾದಿಗಳ ಆಧಾರದ ಮೇಲೆ ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು), 34 (ಸಾಮಾನ್ಯ ಉದ್ದೇಶವನ್ನು ಮುಂದಿಟ್ಟುಕೊಂಡು ಹಲವಾರು ವ್ಯಕ್ತಿಗಳು ಮಾಡಿದ ಕೃತ್ಯಗಳು), 298 (ಯಾವುದೇ ವ್ಯಕ್ತಿಯ ಧಾರ್ಮಿಕ ಭಾವನೆಗಳನ್ನು ನೋಯಿಸುವ ಉದ್ದೇಶಪೂರ್ವಕ ಉದ್ದೇಶ), 505 (2) (ಸಾರ್ವಜನಿಕ ಕಿಡಿಗೇಡಿತನಕ್ಕೆ ಕಾರಣವಾಗುವ ಹೇಳಿಕೆಗಳು) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.



Join Whatsapp