ಪೊಲೀಸ್ ಕಸ್ಟಡಿಯಲ್ಲಿ ಮುಸ್ಲಿಮ್ ವ್ಯಕ್ತಿ ಸಾವು: ವ್ಯವಸ್ಥಿತ ಹತ್ಯೆ ಎಂದ ಕುಟುಂಬ ಸದಸ್ಯರು

Prasthutha|

ಅಹ್ಮದಾಬಾದ್: ಗೋಮಾಂಸ ಸಾಗಾಟ ಆರೋಪದಲ್ಲಿ ಬಂಧಿತನಾದ ಮುಸ್ಲಿಮ್ ವ್ಯಕ್ತಿ ಪೊಲೀಸ್ ಕಸ್ಟಡಿಯಲ್ಲಿದ್ದಾಗಲೇ ಸಾವನ್ನಪ್ಪಿದ್ದು, ಇದೊಂದು ಕೊಲೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಆದರೆ ಈ ಆರೋಪವನ್ನು ಪೊಲೀಸರು ತಳ್ಳಿ ಹಾಕಿದ್ದು, ಆರೋಪಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿಸಿದ್ದಾರೆ.

ಗೋಮಾಂಸ ಸಾಗಾಟ ಆರೋಪದಲ್ಲಿ ಗುಜರಾತಿನ ಗೋದ್ರಾ ಬಿ ಪೊಲೀಸ್ ಠಾಣೆಯ ಪೊಲೀಸರು ಖಾಸೀಮ್ ಅಬ್ದುಲ್ಲಾ ಹಯಾತ್ ಎಂಬವರನ್ನು ಬಂಧಿಸಿದ್ದರು. ಬಂಧನದ ಬಳಿಕ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸದೆ ಠಾಣೆಯಲ್ಲೇ ಇರಿಸಿಕೊಂಡಿದ್ದರು.
ಗುಜರಾತ್ ನಲ್ಲಿ ಗೋಮಾಂಸವನ್ನು ಗ್ರಾಹಕರಿಗೆ ಮಾರಾಟ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹಯಾತ್ ಅವರನ್ನು ಬಂಧಿಸಲಾಗಿತ್ತು. ಆರೋಪಿ ವಿರುದ್ಧ ಐಪಿಸಿ ಸೆಕ್ಷನ್ 429, 1960 ರ ಸೆಕ್ಷನ್ 11, 2017 ರ ಗೋಹತ್ಯೆ ನಿಷೇಧ ತಿದ್ದುಪಡಿ ಕಾಯ್ದೆಯಡಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

- Advertisement -

ಗುರುವಾರ ಮುಂಜಾನೆಯಿಂದ ಹಯಾತ್ ಅವರ ಕೊನೆಯ ಚಲನವಲನಗಳು ಪೊಲೀಸ್ ಠಾಣೆಯ ಸಿಸಿಟಿವಿ ದೃಶ್ಯಾವಳಿಗಳಲ್ಲಿ ಸೆರೆಯಾಗಿವೆ. ಹಯಾತ್ ಅವರ ಮೃತದೇಹ ಭಾಗಶಃ ನೇತಾಡುತ್ತಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಘಟನೆಯ ಕುರಿತು ವಾಸ್ತವವನ್ನು ಅರಿಯಲು ನಾವು ವೈದ್ಯಕೀಯ ವರದಿಯ ನಿರೀಕ್ಷೆಯಲ್ಲಿದ್ದೇವೆ ಎಂದು ಪಂಚಮಹಲ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೀನಾ ಪಾಟೀಲ್ ಮಾಧ್ಯಮಕ್ಕೆ ತಿಳಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಹಯಾತ್ ಕುಟುಂಬ ಪೊಲೀಸರು ವ್ಯವಸ್ಥಿತವಾಗಿ ಕೊಲೆ ನಡೆಸಿದ್ದಾರೆ. ಆದ್ದರಿಂದ ಉನ್ನತ ಮಟ್ಟದ ತನಿಖೆ ನಡೆಸಬೇಕೆಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ.

- Advertisement -