ತೈವಾನ್: ಚೀನಾ ನಮ್ಮ ದೇಶದ ಮೇಲೆ ಆಕ್ರಮಣ ನಡೆಸಿದರೆ ವಿಶ್ವದ ವಿವಿಧ ರಾಷ್ಟ್ರಗಳು ಚೀನಾ ವಿರುದ್ಧ ಕ್ರಮ ಕೈಗೊಳ್ಳಲಿವೆ ಎಂದು ತೈವಾನ್ ವಿದೇಶಾಂಗ ಸಚಿವ ಜೋಸೆಫ್ ವು ಹೇಳಿದ್ದಾರೆ. ರಷ್ಯಾ ಉಕ್ರೇನ್ ಮೇಲೆ ಆಕ್ರಮಣ ನಡೆಸುತ್ತಿರುವಂತೆ, ನಮ್ಮ ರಾಷ್ಟ್ರದ ಮೇಲೆ ಚೀನಾ ದಾಳಿ ನಡೆಸಿದರೆ ಅಂತರಾಷ್ಟ್ರೀಯ ಸಮುದಾಯ ತೈವಾನ್ ಪರ ನಿಲ್ಲಲಿದೆ ಎಂದುಚ ಜೋಸೆಫ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಚೀನಾ ಸೇನೆ ಭವಿಷ್ಯದಲ್ಲಿ ತೈವಾನ್ ಮೇಲೆ ದಾಳಿ ನಡೆಸಿದರೆ, ಅಂತರರಾಷ್ಟ್ರೀಯ ಸಮುದಾಯ ತೈವಾನ್‌ಗೆ ಖಂಡಿತವಾಗಿಯೂ ಬೆಂಬಲ ನೀಡಲಿದೆ. ಅಲ್ಲದೇ ಆಕ್ರಮಣಕಾರಿ ನಡೆಯ ವಿರುದ್ಧ ವಿವಿಧ ರಾಷ್ಟ್ರಗಳು ಚೀನಾಗೆ ನಿರ್ಬಂಧಗಳನ್ನು ಹೇರಲಿದೆ’ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ. ‘ಹಾಗಾಗಿ, ತೈವಾನ್ ವಿಶ್ವ ಸಮುದಾಯದೊಂದಿಗೆ ನಿಂತಿದೆ ಮತ್ತು ಈ (ನಿರ್ಬಂಧ) ಕ್ರಮಗಳನ್ನು ಕೈಗೊಂಡಿದೆ’ ಎಂದು ಹೇಳಿದ್ದಾರೆ.
ಇದೀಗಾಗಲೇ ರಷ್ಯಾ ವಿರುದ್ಧ ಪಾಶ್ಚಾತ್ಯ ರಾಷ್ಟ್ರಗಳು ನಿರ್ಬಂಧ ಹೇರಿವೆ. ತೈವಾನ್ ಕೂಡ ಪಾಶ್ಚಾತ್ಯ ರಾಷ್ಟ್ರಗಳ ನಿರ್ಧಾರವನ್ನು ಬೆಂಬಲಿಸಿದೆ. ತೈವಾನ್ ರಷ್ಯಾದ ಮಿತ್ರ ರಾಷ್ಟ್ರ ಬೆಲಾರಸ್ ಜೊತೆಗಿನ ವಾಣಿಜ್ಯ ವ್ಯವಹಾರಕ್ಕೂ ಕಡಿವಾಣ ಹಾಕಿದೆ. ಉಕ್ರೇನ್ ಮೇಲಿನ ರಷ್ಯಾದ ಅತಿಕ್ರಮಣ ಹಾಗೂ ರಷ್ಯಾಗೆ ಬೆಂಬಲ ನೀಡುತ್ತಿರುವ ಬೆಲಾರಸ್ ನಡೆಯನ್ನು ಖಂಡಿಸುವ ಇತರ ದೇಶಗಳೊಂದಿಗೆ ನಿಲ್ಲುವುದು ತುಂಬಾ ಮುಖ್ಯವಾದದ್ದು ಎಂದು ಜೋಸೆಫ್ ಹೇಳಿದ್ದಾರೆ.