ಬೆಂಗಳೂರು : ಸೇನಾ ನೇಮಕಾತಿಯಲ್ಲಿ ಅಗ್ನಿಪಥ್ ಯೋಜನೆ ವಿರೋಧಿಸಿ ದೇಶದಲ್ಲಿ ಹಿಂಸಾಚಾರ ನಡೆಯುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ನವದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉತ್ತರ ಭಾರತದ ಕೆಲ ರಾಜ್ಯಗಳ ನಂತರ ನೆರೆಯ ತೆಲಂಗಾಣಕ್ಕೂ ಗಲಭೆ ಕಾಲಿಟ್ಟಿದೆ. ಈ ಹಿನ್ನೆಲೆಯಲ್ಲಿ ನಿನ್ನೆಯೇ ರಾಜ್ಯ ಪೊಲೀಸ್ ಮಹಾನಿರ್ದೇಶಕರು, ಕಾನೂನು ಸುವ್ಯವಸ್ಥೆ ಎಡಿಜಿಪಿ ಮತ್ತು ಗೃಹ ಕಾರ್ಯದರ್ಶಿಗಳಿಗೆ ಎಚ್ಚರಿಕೆ ನೀಡಿದ್ದು, ರಾಜ್ಯದಲ್ಲಿ ಗಲಭೆ, ಗೊಂದಲಗಳು ಆಗದಂತೆ ನೋಡಿಕೊಳ್ಳುವಂತೆ ಸೂಚನೆ ನೀಡಿದ್ದೇನೆ ಎಂದು ಹೇಳಿದರು.
ರಾಜ್ಯದಲ್ಲಿ ಅಗತ್ಯ ಮುನ್ನೆಚ್ಚರಿಕೆ ಕೈಗೊಳ್ಳಲಾಗುತ್ತದೆ. ರಾಜ್ಯದಲ್ಲಿ ಶಾಂತಿ, ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆಯ ಅಧಿಕಾರಿಗಳು ಹೆಚ್ಚಿನ ಗಮನ ಹರಿಸಲಿದ್ದಾರೆ ಎಂದರು.
ಅಗ್ನಿಪಥ್ ಯೋಜನೆಯನ್ನು ಸದುದ್ದೇಶದಿಂದ ಮಾಡಲಾಗಿದೆ. ಆದರೆ, ಈಗ ಯೋಜನೆಗೆ ಕೆಲ ರಾಜ್ಯಗಳಲ್ಲಿ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಕೇಂದ್ರದಿಂದ ಇನ್ನಷ್ಟು ಸ್ಪಷ್ಟೀಕರಣ ಬರಲಿದೆ. ಬಂದಾಗ ನೋಡೋಣ ಎಂದು ಅಗ್ನಿಪಥ್ ಯೋಜನೆ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.