ನವದೆಹಲಿ: “ನನ್ನ ವೃತ್ತಿಜೀವನಕ್ಕೆ BCCI ಹಾಗೂ ಧೋನಿ” ವಿಲನ್ ಆದರು ಎಂದು ಹರ್ಭಜನ್ ಸಿಂಗ್ ಸ್ಫೋಟಕ ವಿಷಯವನ್ನು ಹೊರ ಹಾಕಿದ್ದಾರೆ.
ಈ ಕುರಿತು ಹೇಳಿದ ಅವರು, ಟೀಂ ಇಂಡಿಯಾದಿಂದ ಹೊರಗುಳಿಯಲು ಕ್ಯಾಪ್ಟನ್ ಕೂಲ್ ಎಂಎಸ್ ಧೋನಿ ಮತ್ತು ಬಿಸಿಸಿಐ ಕಾರಣ. “ನನಗೆ ಅದೃಷ್ಟ ಯಾವಾಗಲೂ ಚೆನ್ನಾಗಿತ್ತು. ಕೆಲವೊಂದು ಬಾಹ್ಯ ವಿಷಯಗಳು ನನ್ನ ಪರ ಇರಲಿಲ್ಲ, ಅವು ಸಂಪೂರ್ಣವಾಗಿ ನನ್ನ ವಿರುದ್ಧ ಇದ್ದವು. ನಾನು ಬೌಲಿಂಗ್ ಮಾಡುತ್ತಿದ್ದ ರೀತಿ ಹಾಗೂ ಮುಂದೆ ಸಾಗುತ್ತಿದ್ದ ಬಗೆಯ ಕಾರಣ ಹೀಗಾಗಿರಬಹುದು. ನಾನು 400 ವಿಕೆಟ್‌ಗಳನ್ನು ಪಡೆದಾಗ ನನಗೆ 31 ವರ್ಷ ವಯಸ್ಸು, ಇನ್ನೂ 4-5 ವರ್ಷಗಳು ಆಡಿದ್ದರೆ, ನನಗೆ ನಾನು ಕಟ್ಟಿಕೊಂಡಿದ್ದ ಮಟ್ಟವನ್ನು ಗಮನದಲ್ಲಿಟ್ಟುಕೊಂಡಲ್ಲಿ, ನಾನು ಇನ್ನೂ 100-150 ವಿಕೆಟ್‌ಗಳನ್ನು ಪಡೆಯಬಹುದಿತ್ತು,” ಎಂದು ತಿಳಿಸಿದ್ದಾರೆ.
“ಹೌದು ಧೋನಿ ಆಗ ನಾಯಕರಾಗಿದ್ದರು ಆದರೆ ಇದು ಅವರ ತಲೆ ಮೀರಿದ ವಿಚಾರ ಎನಿಸುತ್ತದೆ. ಇದರಲ್ಲಿ ಬಿಸಿಸಿಐನ ಅಧಿಕಾರಿಗಳು ಭಾಗಿಯಾಗಿದ್ದರು ಎಂದು ನನಗೆ ಅನಿಸುತ್ತದೆ, ಅವರಿಗೆ ನಾನು ಬೇಕಿರಲಿಲ್ಲ ಮತ್ತು ನಾಯಕ ನನ್ನನ್ನು ಬೆಂಬಲಿಸಬಹುದಿತ್ತು, ಆದರೆ ಬಿಸಿಸಿಐಗಿಂತ ಒಬ್ಬ ನಾಯಕ ಯಾವತ್ತೂ ದೊಡ್ಡವನಾಗಲಾರ. ನಾಯಕ, ಕೋಚ್ ಮತ್ತು ತಂಡಕ್ಕಿಂತ ಬಿಸಿಸಿಐ ಅಧಿಕಾರಿಗಳು ದೊಡ್ಡವರಾಗಿದ್ದಾರೆ,” ಎಂದು ಭಜ್ಜಿ ಹೇಳಿಕೊಂಡಿದ್ದಾರೆ.
ಇದೇ ವೇಳೆ, ಬಿಸಿಸಿಐ ಧೋನಿಗೆ ಕೊಟ್ಟ ಬೆಂಬಲದ ಕುರಿತು ಮಾತನಾಡಿದ ಭಜ್ಜಿ, “ಇತರೆ ಆಟಗಾರರಿಗಿಂತ ಧೋನಿಗೆ ಹೆಚ್ಚು ಬೆಂಬಲ ಸಿಗುತ್ತಿತ್ತು, ಇತರೆ ಆಟಗಾರರಿಗೂ ಈ ಬೆಂಬಲ ಸಿಕ್ಕಿದ್ದಲ್ಲಿ ಅವರೂ ಚೆನ್ನಾಗಿ ಆಡುತ್ತಿದ್ದರು. ಇತರ ಆಟಗಾರರಿಗೆ ಬ್ಯಾಟಿಂಗ್ ಅಥವಾ ಬೌಲಿಂಗ್ ಮಾಡಲು ಬರುತ್ತಿರಲಿಲ್ಲ ಎಂದರ್ಥವಲ್ಲ,” ಎಂದು ಹೇಳಿದ್ದಾರೆ.
ಕಳೆದ ಕೆಲ ವರ್ಷಗಳಿಂದ ತಂಡದಿಂದ ಹೊರಗೇ ಉಳಿದಿದ್ದ ಭಜ್ಜಿ, ಅವಕಾಶಗಳ ಕೊರತೆಯೊಂದಿಗೆ ವಯಸ್ಸೂ ಸಹ 41 ದಾಟಿದ ನಡುವೆ ಎಲ್ಲಾ ಮಾದರಿಯ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ರಾಜೀನಾಮೆ ಘೋಷಿಸಿದ್ದಾರೆ.