ಬೆಂಗಳೂರು: ಶಿವಾಜಿ ನಗರದಲ್ಲಿರುವ ವಿ.ಕೆ ಉಬೇದುಲ್ಲಾ ಶಾಲೆಗೆ ರಾಜ್ಯ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಭೇಟಿ ನೀಡಿದರು. ವಿ.ಕೆ ಒಬೇದುಲ್ಲಾ ಶಾಲೆಯ ಉಸ್ತುವಾರಿ ವಹಿಸಿರುವ ಹಮೀದ್ ಷಾ ಟ್ರಸ್ಟ್ ನ ಅಧ್ಯಕ್ಷ ಜಿ.ಎ ಬಾವಾ ಸಚಿವರನ್ನು ಸ್ವಾಗತಿಸಿದರು. ಶಾಲೆಯ ಪ್ರಗತಿ ಮತ್ತು ಸ್ಥಿತಿಗತಿಯನ್ನು ಪರಿಶೀಲಿಸಿದ ಸಚಿವರು, ಸರಕಾರವು ಈ ಶಾಲೆಯ ಅಭಿವೃ ದ್ಧಿಗೆ ಬೇಕಾದ ಸಂಪೂರ್ಣ ನೆರವು ನೀಡಲಿದೆ, ಈಗಾಗಲೇ ಇಲ್ಲಿ ಎಲ್.ಕೆ.ಜಿ ಯಿಂದಲೇ ಇಂಗ್ಲೀಷ್ ಮೀಡಿಯಂ ಶಾಲೆ ಇದ್ದು ಮುಂದೆ ಪಿಯುಸಿ ಆರಂಭಿಸಲು ಬೇಕಾದ ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಸಂಪೂರ್ಣ ಸಹಕಾರ ನೀಡುವುದಾಗಿ ಹೇಳಿದರು.
ಐ.ಎಂ.ಎ ಹಗರಣವಾದಾಗ ಅನಾಥವಾದ ಈ ಶಾಲೆಯಲ್ಲಿ ಕಲಿಯುತ್ತಿದ್ದ 1500 ವಿದ್ಯಾರ್ಥಿಗಳ ಬದುಕು ಅತಂತ್ರವಾಗಿತ್ತು. ಈ ಸಂದರ್ಭ ಶಾಲೆಯನ್ನು ಮುನ್ನಡೆಸಲು ಸಾಧ್ಯವಾಗದೆ ಇದ್ದಾಗ ವಾರ್ಷಿಕ 1 ಕೋಟಿ 10 ಲಕ್ಷ ರುಪಾಯಿ ವೆಚ್ಚದ ಯೋಜನೆ ರೂಪಿಸಿ ಹಮೀದ್ ಷಾ ಮತ್ತು ಮುಹೀಬ್ ಷಾ ಟ್ರಸ್ಟ್ ಇದನ್ನು ನಿರ್ವಹಿಸುವ ಜವಾಬ್ದಾರಿ ವಹಿಸಿತ್ತು. ಜಿ.ಎ ಬಾವಾರವರ ಮುತುವರ್ಜಿಯ ಪ್ರಯತ್ನದಿಂದ ಶಾಲೆಯು ಮತ್ತೆ ವಿದ್ಯಾರ್ಥಿಗಳ ಬದುಕು ರೂಪಿಸುವ ಕಾರ್ಯ ಮಾಡಿತು. ಶಿವಾಜಿ ನಗರದ ಸುತ್ತಮುತ್ತಲಿನ ಬಡ -ಮಧ್ಯಮವರ್ಗದ ವಿದ್ಯಾರ್ಥಿಗಳಿಗೆ ಉನ್ನತ ದರ್ಜೆಯ ಶಿಕ್ಷಣ ಈಗ ಇಲ್ಲಿ ಸಿಗುತ್ತಿದೆ. ನುರಿತ ಉಪನ್ಯಾಸಕರು, ಸೌಲಭ್ಯಪೂರ್ಣ ತರಗತಿ ಮತ್ತು ವಾತಾವರಣದಲ್ಲಿ ವಿದ್ಯಾರ್ಥಿಗಳು ಜ್ಞಾನ ಸಂಪಾದನೆ ಮಾಡುತ್ತಾರೆ.
ಬಿ.ಸಿ ನಾಗೇಶ್ ರವರು ಶಾಲೆಯ ಅಭಿವೃದ್ಧಿಗೆ ಬೇಕಾದ ನೆರವು ನೀಡುವ ಭರವಸೆ ನೀಡಿದ್ದೂ ಅಲ್ಲದೇ, ಶಾಲೆಯನ್ನು ಉನ್ನತೀಕರಣ ಮಾಡುವ ಯೋಜನೆಗಳನ್ನು ಸಿದ್ಧಪಡಿಸುವಂತೆಯೂ ಹೇಳಿದರು. ಶಿಕ್ಷಣದಿಂದ ಮಾತ್ರವೇ ಸಮಾಜ ಮತ್ತು ದೇಶದ ಪ್ರಗತಿ ಸಾಧ್ಯ, ಈ ನಿಟ್ಟಿನಲ್ಲಿ ಶ್ರಮ ವಹಿಸುವ ಎಲ್ಲಾ ಪ್ರಯತ್ನಗಳ ಜೊತೆಯೂ ಸರಕಾರ ಇರುತ್ತದೆ ಎಂದವರು ಹೇಳಿದರು. ಶಿವಾಜಿ ನಗರದ ಶಾಸಕ ರಿಝ್ವಾನ್ ಹರ್ಷದ್ ಈ ಸಂದರ್ಭ ಉಪಸ್ಥಿತರಿದ್ದರು.