ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP)ಯ ಸುಮಾರು 200 ಪೌರಕಾರ್ಮಿಕರು ಸಿಂಗಾಪುರ ಪ್ರವಾಸಕ್ಕೆ ತೆರಳಲಿದ್ದಾರೆ. ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮ (KSSKDC) ಮೂಲಕ ಸಮಾಜ ಕಲ್ಯಾಣ ಇಲಾಖೆ ಆಯೋಜಿಸಿರುವ ಪ್ರವಾಸಕ್ಕೆ ಬಿಬಿಎಂಪಿ ಅಧಿಕಾರಿಗಳು 200 ಪೌರಕಾರ್ಮಿಕರನ್ನು ಆಯ್ಕೆ ಮಾಡಿದ್ದಾರೆ.
ಪ್ರವಾಸಕ್ಕೆ ಆಯ್ಕೆಯಾದ ಕರ್ನಾಟಕದ 300 ಜನರಲ್ಲಿ 200 ಬಿಬಿಎಂಪಿ ಪೌರಕಾರ್ಮಿಕರು ಸೇರಿದ್ದಾರೆ ಎಂದು ಕೆಎಸ್ಎಸ್ಕೆಡಿಸಿ ಎಂಡಿ ಕೆ.ಬಿ.ಮಲ್ಲಿಕಾರ್ಜುನ ಅವರು ಹೇಳಿದ್ದಾರೆ.
ಉಳಿದ 100 ಪೌರಕಾರ್ಮಿಕರು ಬೆಳಗಾವಿ, ಬಳ್ಳಾರಿ, ದಾವಣಗೆರೆ, ಹುಬ್ಬಳ್ಳಿ-ಧಾರವಾಡ, ಮಂಗಳೂರು, ಮೈಸೂರು, ಕಲಬುರಗಿ, ಶಿವಮೊಗ್ಗ, ತುಮಕೂರು ಮತ್ತು ವಿಜಯಪುರ ಮಹಾನಗರ ಪಾಲಿಕೆಗಳಿಗೆ ಸೇರಿದವರಾಗಿದ್ದಾರೆ.
ಸಿಂಗಾಪುರಕ್ಕೆ ಪ್ರವಾಸ ಕೈಗೊಳ್ಳುತ್ತಿರುವ ಕರ್ನಾಟಕದ ಎಲ್ಲಾ ಪೌರಕಾರ್ಮಿಕರು ಸಿಂಗಾಪುರದಲ್ಲಿ ಅಳವಡಿಸಿಕೊಂಡಿರುವ ಘನತ್ಯಾಜ್ಯ ನಿರ್ವಹಣೆ ಮತ್ತು ಒಳಚರಂಡಿ ಸಂಸ್ಕರಣಾ ಕಾರ್ಯವಿಧಾನಗಳನ್ನು ಅಧ್ಯಯನ ನಡೆಸಲಿದ್ದಾರೆ.