ಜನಸಾಮಾನ್ಯರ ಜೀವದ ಜೊತೆ ಚೆಲ್ಲಾಟವಾಡುತ್ತಿರುವ ಬಿಬಿಎಂಪಿ: ಎಎಪಿ ಆರೋಪ

Prasthutha|

ಬೆಂಗಳೂರು: ಬೆಂಗಳೂರಿನ ಪ್ರಮುಖ ರಸ್ತೆಗಳಿಗೆ ಭೇಟಿ ನೀಡುತ್ತಿರುವ ಬಿಬಿಎಂಪಿ ಆಯುಕ್ತ ತುಷಾರ್‌ ಗಿರಿನಾಥ್ ರವರು ರಸ್ತೆ ಗುಂಡಿಗಳಿಂದ ಬಲಿಯಾದವರ ಮನೆಗಳಿಗೂ ಭೇಟಿ ನೀಡಬೇಕು ಎಂದು ಆಮ್‌ ಆದ್ಮಿ ಪಾರ್ಟಿಯ ಮೋಹನ್‌ ದಾಸರಿ ಆಗ್ರಹಿಸಿದರು.

- Advertisement -


ಮಾಧ್ಯಮಗಳೊಂದಿಗೆ ಮಾತನಾಡಿದ ಮೋಹನ್‌ ದಾಸರಿ, “ರಸ್ತೆ ಗುಂಡಿಗಳಿಗೆ ಸಂಬಂಧಿಸಿ ಆಮ್‌ ಆದ್ಮಿ ಪಾರ್ಟಿಯು 70ಕ್ಕೂ ಹೆಚ್ಚು ದೂರುಗಳನ್ನು ನೀಡಿದೆ. ಆದರೆ ಈವರೆಗೆ ಯಾರ ವಿರುದ್ಧವೂ ಕ್ರಮ ಕೈಗೊಂಡಿಲ್ಲ. ಗುಂಡಿಗಳಿಗೆ ಕಾರಣರಾದ ಭ್ರಷ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳನ್ನು ರಾಜ್ಯ ಸರ್ಕಾರ ಹಾಗೂ ಬಿಬಿಎಂಪಿ ರಕ್ಷಿಸುತ್ತಿದೆ. ಸಾಮಾನ್ಯ ಜನರ ಜೀವದ ಜೊತೆಗೆ ಚೆಲ್ಲಾಟವಾಡಲಾಗುತ್ತಿದೆ” ಎಂದು ಆರೋಪಿಸಿದರು.


“ಬಿಬಿಎಂಪಿ ಆಯುಕ್ತ ತುಷಾರ್‌ ಗಿರಿನಾಥ್‌ರವರಿಗೆ ಬೆಂಗಳೂರಿನ ವಾಸ್ತವ ಪರಿಸ್ಥಿತಿ ತಿಳಿಯಬೇಕಾದರೆ, ರಸ್ತೆಗುಂಡಿಗಳಿಂದ ಬಲಿಯಾದವರ ಮನೆಗಳಿಗೆ ಭೇಟಿ ನೀಡಿ ಅವರ ಕುಟುಂಬದವರನ್ನು ಮಾತನಾಡಿಸಬೇಕು. ಸಂತ್ರಸ್ತರ ಕುಟುಂಬಕ್ಕೆ ಬಿಬಿಎಂಪಿಯಿಂದ ಪರಿಹಾರ ಸಿಕ್ಕಿದೆಯೋ ಇಲ್ಲವೋ ಎಂಬುದನ್ನು ಪರಿಶೀಲಿಸಬೇಕು. ಇನ್ನಾದರೂ ಅವರು ಈ ಕೆಲಸವನ್ನು ಮಾಡಲಿ” ಎಂದು ಮೋಹನ್‌ ದಾಸರಿ ಹೇಳಿದರು.

- Advertisement -


ಸರಿಯಾದ ರಸ್ತೆಗಳನ್ನು ಪಡೆಯುವುದು ಜನರ ಹಕ್ಕು. ಇವುಗಳನ್ನು ಪಡೆಯುವುದಕ್ಕಾಗಿ ಜನರು ವಾಹನ ತೆರಿಗೆ, ರಸ್ತೆ ತೆರಿಗೆ, ಆಸ್ತಿ ತೆರಿಗೆ, ಜಿಎಸ್‌ಟಿ ಮುಂತಾದವುಗಳನ್ನು ಕಟ್ಟಿರುತ್ತಾರೆ. ರಸ್ತೆ ದುರಸ್ತಿಗಾಗಿ ರಾಜ್ಯ ಸರ್ಕಾರದ ಬೊಕ್ಕಸದಿಂದ ಸಾವಿರಾರು ಕೋಟಿ ರೂಪಾಯಿ ಖರ್ಚಾಗಿದ್ದರೂ ಗುಂಡಿಗಳು ಕಡಿಮೆಯಾಗಲಿಲ್ಲ. ದುಡ್ಡನ್ನು ಜೇಬಿಗೆ ಇಳಿಸಿಕೊಂಡು, ಕೇವಲ ಒಂದು ತಿಂಗಳೊಳಗೆ ಕಿತ್ತುಹೋಗುವಷ್ಟು ಕಳಪೆ ಕಾಮಗಾರಿ ಮಾಡಲಾಗುತ್ತಿದೆ. ಈ ಬಗ್ಗೆ ಆಯುಕ್ತರು ಪ್ರತಿಕ್ರಿಯಿಸಬೇಕು” ಎಂದು ಮೋಹನ್‌ ದಾಸರಿ ಆಗ್ರಹಿಸಿದರು.



Join Whatsapp