ಉಡುಪಿ: ದೆಹಲಿಯಲ್ಲಿ ನಡೆದ ಸಿವಿಲ್ ಡಿಫೆನ್ಸ್ ಮಹಿಳಾ ಪೊಲೀಸ್ ಅಧಿಕಾರಿಯ ಅತ್ಯಾಚಾರ ಮತ್ತು ಹತ್ಯೆಯನ್ನು ಖಂಡಿಸಿ ಉಡುಪಿಯ ಎಸ್ ಡಿಪಿಐ ವತಿಯಿಂದ ನಡೆಸಿದ ಪ್ರತಿಭಟನೆಯಲ್ಲಿ ಭಾಗವಹಿಸಿದವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿರುವುದರ ವಿರುದ್ಧ ಕಾನೂನು ಹೋರಾಟ ನಡೆಸಲಾಗುವುದು ಎಂದು ಎಸ್ ಡಿಪಿಐ ರಾಜ್ಯ ಕಾರ್ಯಕಾರಿಣಿ ಸದಸ್ಯ ಭಾಸ್ಕರ್ ಪ್ರಸಾದ್ ಎಚ್ಚರಿಸಿದ್ದಾರೆ.
ದೆಹಲಿಯಲ್ಲಿ ನಡೆದ ಸಿವಿಲ್ ಡಿಫೆನ್ಸ್ ಮಹಿಳಾ ಪೊಲೀಸ್ ಅಧಿಕಾರಿ ಸಾಬಿಯಾ ಸೈಫಿಯ ಅತ್ಯಾಚಾರ ಮತ್ತು ಬರ್ಬರ ಹತ್ಯೆಯನ್ನು ಖಂಡಿಸಿ ಹಾಗೂ ಹತ್ಯೆಯ ಆರೋಪಿಗಳನ್ನು ತಕ್ಷಣವೇ ಪತ್ತೆಹಚ್ಚಿ ಬಂಧಿಸುವಂತೆ ಆಗ್ರಹಿಸಿ ಸೆ.14 ರಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಉಡುಪಿ ಜಿಲ್ಲೆ ವತಿಯಿಂದ ಶಾಂತಿಯುತ ಪ್ರತಿಭಟನೆ ಮತ್ತು ಜಾಥವನ್ನು ಹಮ್ಮಿಕೊಳ್ಳಲಾಗಿತ್ತು . ಈ ಪ್ರತಿಭಟನೆಯ ಸಲುವಾಗಿ ಪೂರ್ವಾನುಮತಿಗಾಗಿ ಹಾಗೂ ಧ್ವನಿರ್ವಧಕದ ಬಳಕೆಯ ಅನುಮತಿಗಾಗಿ ಉಡುಪಿ ತಹಶೀಲ್ದಾರ್ ಅವರನ್ನು ಭೇಟಿ ಮಾಡಲಾಗಿತ್ತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರ ಕಚೇರಿಗೆ ಭೇಟಿ ನೀಡಿ ಈ ಕುರಿತು ಡಿವೈಎಸ್ಪಿಯವರೊಂದಿಗೆ ಚರ್ಚಿಸಿದಾಗ, ಅವರು 50 ರಿಂದ 100 ಮಂದಿ ಸೇರಿ ಪ್ರತಿಭಟನೆ ನಡೆಸಲು ಮೌಖಿಕ ಅನುಮತಿ ನೀಡಿದ್ದು ಅದರಂತೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು ಎಂದು ಅವರು ಮಾಹಿತಿ ನೀಡಿದರು.
ಎಲ್ಲಾ ರೀತಿಯ ಕೋವಿಡ್ ನಿಯಮಗಳನ್ನು ಪಾಲಿಸಿಕೊಂಡು ಶಾಂತಿಯುತವಾದ ಪ್ರತಿಭಟನೆಯನ್ನು ನಡೆಸಲಾಗಿದೆ. ಆದರೆ ಪ್ರತಿಭಟನೆ ಮುಗಿದ ಬಳಿಕ ನಗರ ಠಾಣೆಯ ಎಸ್ ಐ ಮತ್ತು ವೃತ್ತ ನಿರೀಕ್ಷಕರ ಆದೇಶದ ಮೇರೆಗೆ ಹಲವರನ್ನು ವಶಕ್ಕೆ ಪಡೆದು ಠಾಣೆಯಲ್ಲಿ ರಾತ್ರಿ ಸುಮಾರು 12 ಗಂಟೆ ತನಕ ಕಾಯಿಸಿ ಕೇಸು ದಾಖಲಿಸಿದ್ದಾರೆ. ಅಲ್ಲದೇ ಈ ಪ್ರತಿಭಟನಾ ಸಭೆಗೆ ಅತಿಥಿ ಗಳಾಗಿ ಭಾಗವಹಿಸಿದವರು ಹಾಗೂ ಮಹಿಳಾ ಅತಿಥಿಗಳ ವಿರುದ್ಧವೂ ಪ್ರಕರಣ ದಾಖಲಿಸಲಾಗಿದೆ. ಕಾರ್ಯಕ್ರಮಕ್ಕೆ ಆಗಮಿಸಿದವರ ವಾಹನಗಳನ್ನು ವಶಪಡಿಸಿಕೊಂಡು ದಂಡವಿಧಿಸಲಾಗಿದೆ ಎಂದು ಅವರು ಆರೋಪಿಸಿದರು.
ಸಂವಿಧಾನ ವ್ಯವಸ್ಥೆಯಲ್ಲಿ ಪ್ರತಿಭಟಿಸುವ ಹಕ್ಕು ದೇಶದ ಪ್ರತಿಯೊಬ್ಬ ನಾಗರಿಕನಿಗೂ ಇದೆ. ಆದ್ದರಿಂದ ಪ್ರತಿಭಟಿಸುವ ಹಕ್ಕನ್ನು ಕಸಿಯುವ ಮೂಲಕ ಜಿಲ್ಲೆಯಲ್ಲಿ ಎಸ್ ಡಿಪಿಐ ಅನ್ನು ದಮನಿಸುವ ಹಾಗೂ ದ್ವೇಷದ ವಾತಾವರಣವನ್ನು ಸೃಷ್ಟಿಸಲು ಕೆಲವೊಂದು ಸ್ಥಾಪಿತ ಹಿತಾಸಕ್ತಿಗಳು ಮುಂದಾಗಿರುವುನ್ನು ಎಸ್ಡಿಪಿಐ ಖಂಡಿಸುತ್ತದೆ. ಅಲ್ಲದೇ ಇಂತಹ ಪ್ರತಿಭಟಿಸುವ ಹಕ್ಕನ್ನು ಕಸಿಯುತ್ತಿರುವ ಪೊಲೀಸ್ ಇಲಾಖೆಯ ವಿರುದ್ಧ ಕಾನೂನು ಹೋರಾಟಕ್ಕೆ ಎಸ್ ಡಿಪಿಐ ಬದ್ಧವಾಗಿದೆ ಎಂದು ಅವರು ತಿಳಿಸಿದರು.