ಬೆಳಗಾವಿ: ಬೆಳಗಾವಿಯ ಸುವರ್ಣಸೌಧದಲ್ಲಿ ಬುಧವಾರ ನಡೆಯಲಿರುವ ವಿಧಾನ ಪರಿಷತ್ ಸಭಾಪತಿ ಸ್ಥಾನದ ಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಮಂಗಳವಾರ ನಾಮಪತ್ರ ಸಲ್ಲಿಸಿದ್ದಾರೆ.
ವಿಧಾನ ಪರಿಷತ್ ಕಾರ್ಯದರ್ಶಿ ಕೆ. ಆರ್. ಮಹಾಲಕ್ಷ್ಮಿ ಅವರಿಗೆ ಹೊರಟ್ಟಿ ನಾಮಪತ್ರ ಸಲ್ಲಿಸಿದರು. ಈ ವೇಳೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಸೇರಿದಂತೆ ಹಿರಿಯ ಮುಖಂಡರು ಉಪಸ್ಥಿತರಿದ್ದರು.
ಸಮಾಜ ಕಲ್ಯಾಣ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ಸಭೆಯಲ್ಲಿ ಆಡಳಿತಾರೂಢ ಬಿಜೆಪಿ ಸಭಾಪತಿ ಸ್ಥಾನಕ್ಕೆ ಬಸವರಾಜ ಹೊರಟ್ಟಿ ಅವರ ಹೆಸರನ್ನು ಅಂತಿಮಗೊಳಿಸಿತ್ತು.
ಇದೀಗ ಹಂಗಾಮಿ ಸಭಾಪತಿಯಾಗಿರುವ ಬಿಜೆಪಿ ಎಂಎಲ್‌ಸಿ ರಘುನಾಥ ಮಲ್ಕಾಪುರೆ ಅವರು ಸಭಾಪತಿ ಸ್ಥಾನದ ಆಕಾಂಕ್ಷಿಯಾಗಿದ್ದರು. ಆದರೆ, ಈ ಹಿಂದೆಯೂ ಪರಿಷತ್ತಿನ ಸಭಾಪತಿಯಾಗಿದ್ದ ಹೊರಟ್ಟಿ ಅವರಿಗೆ ಅದೇ ಹುದ್ದೆ ನೀಡಲಾಗುವುದು ಎಂದು ಪಕ್ಷವು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಗೊಂಡಾಗ ಭರವಸೆ ನೀಡಿತ್ತು.
ನಾಮಪತ್ರ ಸಲ್ಲಿಕೆ ಬಳಿಕ ಮಾತನಾಡಿದ ಹೊರಟ್ಟಿ, ನನಗೆ ಇದೊಂದು ಅವಿಸ್ಮರಣೀಯ ದಿನ. ನಾನು ನಾಮಪತ್ರ ಸಲ್ಲಿಸುವಾಗ ಸಿಎಂ, ಯಡಿಯೂರಪ್ಪ, ಅಶೋಕ ಸೇರಿ ಸಚಿವರು ಬಂದಿದ್ದಾರೆ. ಈ ಹಿಂದೆ ನಾನು ಬಹಳ ಸಲ ನಾಮಪತ್ರ ಸಲ್ಲಿಸಿದ್ದೇನೆ. ಆಗ ಸಿಎಂ ಸೇರಿ ಇಷ್ಟು ಜನ ಬಂದಿರಲಿಲ್ಲ. ಹಿಂದೆ ರಾಮಕೃಷ್ಣ ಹೆಗಡೆ ಅವರನ್ನು ಬಿಟ್ಟರೆ ಯಾರೂ ಬಂದಿರಲಿಲ್ಲ. ಆದರೆ ಇಂದು ನಮ್ಮ ಪಕ್ಷದ ನಾಯಕರೆಲ್ಲರೂ ಬಂದಿದ್ದರು. ನಾನು ಅತ್ಯಂತ ವಿಶ್ವಾಸದಿಂದ ನಾಮಪತ್ರ ಸಲ್ಲಿಸಿದ್ದೇನೆ. ಪಕ್ಷ ನನ್ನ ಮೇಲೆ ಇಟ್ಟಿರುವ ನಂಬಿಕೆ, ವಿಶ್ವಾಸವನ್ನು ಎಂದೆಂದೂ ದುರುಪಯೋಗ ಮಾಡಲ್ಲ. ನನ್ನ ಮೇಲೆ ಇಟ್ಟಿರುವ ವಿಶ್ವಾಸ ಕಾಯ್ದುಕೊಂಡು, ಪಕ್ಷಕ್ಕೆ ಸರ್ಕಾರಕ್ಕೆ ಒಳ್ಳೆಯ ಹೆಸರು ತರುವಂತೆ ಕೆಲಸ ಮಾಡಲಿದ್ದೇನೆ ಎಂದರು.