ಬೆಂಗಳೂರು: ರೈತರ ಸಾಲದ ಮೇಲೆ ಜಪ್ತಿ ಆಗಲಿ, ಹರಾಜಾಗಲಿ ಮಾಡಬಾರದು ಎಂಬ ಕಾನೂನನ್ನು ತರಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಜಿಕೆವಿಕೆ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಕೃಷಿ ಮೇಳದ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು, ರೈತರಿಗೆ ಪ್ರಶಸ್ತಿಗಳನ್ನು ಪ್ರದಾನ ಮಾಡಿ ಮಾತನಾಡಿದ ಬೊಮ್ಮಾಯಿ, ರೈತರ ಸಾಲ ಮಾರುಪಾವತಿಯಾಗದಿದ್ದಾಗ ಸಮಯಾವಕಾಶ ಕೊಟ್ಟು, ಸಹಾಯ ಮಾಡಬೇಕೇ ಹೊರತಾಗಿ ಯಾವುದೇ ಜಪ್ತಿ/ ಹರಾಜು ಮಾಡುವುದು ಮಾಡಬಾರದೆಂದು ಸಹಕಾರ ಹಾಗೂ ಇತರೆ ಇಲಾಖೆಗಳಿಗೆ ಸೂಚನೆ ನೀಡಿದ್ದು, ಇಲಾಖೆಗಳು ರೈತರ ಸಂಕಷ್ಟಕ್ಕೆ ಸ್ಪಂದಿಸುತ್ತಿವೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.
ದುಡಿಯುವ ವರ್ಗಕ್ಕೆ ಬಲ:
ರೈತರ ಮಕ್ಕಳಿಗೆ ರೈತ ವಿದ್ಯಾನಿಧಿ ಜಾರಿಯಾಗಿದೆ. 10 ಲಕ್ಷ ರೈತ ಕುಟುಂಬಗಳಿಗೆ ಈ ವರ್ಷ ಮುಟ್ಟಿದೆ. ರೈತ ಕೂಲಿಕಾರರ ಮಕ್ಕಳು, ನೇಕಾರರು, ಮೀನುಗಾರರು, ಟ್ಯಾಕ್ಸಿ ಹಾಗೂ ಆಟೋ ರಿಕ್ಷಾ ಚಾಲಕರ ಮಕ್ಕಳಿಗೆ ಯೋಜನೆಯನ್ನು ವಿಸ್ತರಿಸಲಾಗಿದೆ. ದುಡಿಯುವ ವರ್ಗಕ್ಕೆ ಬಲ ತುಂಬಲಾಗುತ್ತಿದೆ. ದುಡಿಮೆ ಮಾಡುವವರಿಗೆ ಶಕ್ತಿ ತುಂಬುತ್ತಿದ್ದೇವೆ. ಆರ್ಥಿಕ ಬೆಳವಣಿಗೆಗೆ ಕಾರಣರಾಗುವವರು ಕೆಳಹಂತದ ಜನ. ದುಡಿಯುವವರಿಂದ ಮಾತ್ರ ಇದು ಸಾಧ್ಯ. ಅವರು ಆರ್ಥಿಕವಾಗಿ ಸಬಲರಾದರೆ ದೇಶ ಸಬಲವಾಗುತ್ತದೆ. ಕೃಷಿಯಲ್ಲಿ ಶೇ 60 ರಷ್ಟು ಜನ ಅವಲಂಬಿತರಾಗಿದ್ದಾರೆ. ಅವರು ಆರ್ಥಿಕವಾಗಿ ಅಭಿವೃದ್ಧಿಯಾದರೆ ದೇಶ ಅಭಿವೃದ್ಧಿಯಾಗುತ್ತದೆ. ಕೃಷಿ ವಲಯದಲ್ಲಿ ಶೇ 1 ರಷ್ಟು ಬೆಳವಣಿಗೆಯಾದರೆ, ನಾವು ಕೈಗಾರಿಕೆಯಲ್ಲಿ ಹಾಗೂ ಸೇವಾ ವಲಯದಲ್ಲಿ ಹೆಚ್ಚಿನ ಬೆಳವಣಿಗೆಯಾಗುತ್ತದೆ ಎಂದರು.
ಕೃಷಿ ವಿವಿಗಳು ಸರ್ಕಾರದ ಜೊತೆಗೆ ನಿಕಟವಾಗಿ ಕೆಲಸ ಮಾಡಬೇಕು:
ಆರ್ಥಿಕ ಅಭಿವೃದ್ಧಿ ಕೃಷಿ ವಲಯದ ಮೇಲೆ ಹೆಚ್ಚು ಅವಲಂಬಿತವಾಗಿದೆ. ವಿದ್ಯಾಲಯಗಳು ಆಗ್ರೋ- ಎಕನಾಮಿಕ್ಸ್ ಕುರಿತಾಗಿ ಸಂಶೋಧನೆಗಳನ್ನು ಕೈಗೊಂಡು ಸರ್ಕಾರಕ್ಕೆ ಸಲಹೆ ನೀಡಬೇಕು. ಕೃಷಿ ವಿವಿಗಳು ಸರ್ಕಾರದ ಜೊತೆಗೆ ನಿಕಟವಾಗಿ ಕೆಲಸ ಮಾಡಬೇಕು. ಹೊಸ ಸಂಶೋಧನೆ, ವಿಧಾನಗಳ ಬಗ್ಗೆ ತಿಳಿಸಬೇಕು. ಅದಕ್ಕಾಗಿಯೇ ಸೆಕಂಡರಿ ಕೃಷಿ ನಿರ್ದೇಶನಾಲಯ ಸ್ಥಾಪನೆಯಾಗಿದೆ. ಇದಕ್ಕೆ ಕೊಡುಗೆ ನೀಡಬೇಕು. ಸರ್ಕಾರಕ್ಕೆ ಮಾರ್ಗದರ್ಶನವಾಗುತ್ತದೆ. ಈ ಬಗ್ಗೆ ಕೃಷಿ ವಿಶ್ವವಿದ್ಯಾಲಯ ಚಿಂತಿಸಬೇಕು. ಕೃಷಿ ಮೇಳದ ಜೊತೆಗೆ ಸಮನ್ವಯ ಸಾಧಿಸುವ ಹತ್ತು ಹಲವಾರು ಕಾರ್ಯಕ್ರಮಗಳು ಆಗುತ್ತಿರುವುದು ಶ್ಲಾಘನೀಯ. ಬೆಂಗಳೂರು ಹಾಗೂ ಧಾರವಾಡ ವಿವಿಗಳು 58 ವರ್ಷಗಳಿಂದ ಅತ್ಯುತ್ತಮ ಕೆಲಸ ಮಾಡಿಕೊಂಡು ಬಂದಿವೆ. ನೈಸರ್ಗಿಕ ಕೃಷಿಯನ್ನು ತಲಾ ಒಂದು ಸಾವಿರ ಎಕರೆಯಲ್ಲಿ ಅಭಿವೃದ್ಧಿಪಡಿಸಲು ಗುರಿಯನ್ನು ನಿಗದಿಮಾಡಿದೆ. ಅಲ್ಪ ಬಂಡವಾಳದಿಂದ ಹೆಚ್ಚಿನ ಉತ್ಪಾದನೆ ಮಾಡುವುದು, ಯಾವುದೇ ರಾಸಾಯನಿಕ ಬಳಕೆ ಇಲ್ಲದೇ ಅಧ್ಯಯನ ಮಾಡಿ ವರದಿ ನೀಡಲು ಸೂಚಿಸಿದೆ. ನವೆಂಬರ್ 1 ರಿಂದ ರೈತರಿಗಾಗಿ ಯಶಸ್ವಿನಿ ಯೋಜನೆಯನ್ನು ಪುನ: ಪ್ರಾರಂಭಿಸಲಾಗಿದೆ. ರೈತ ಸಹಾಯಧನ ಯೋಜನೆಯಡಿ ಯೋಜನೆಯಲ್ಲಿ ಡೀಸಲ್ ಸಬ್ಸಿಡಿ, 2023 ರ ಜನರಿಯಲ್ಲಿ ಅಂತರರಾಷ್ಟ್ರೀಯ ಸಿರಿಧಾನ್ಯ ಮೇಳ ಆಯೋಜಿಸಿದೆ ಎಂದರು.
ರೈತ ಸ್ನೇಹಿ ಕಾರ್ಯಕ್ರಮಗಳ ಹೆಚ್ಚಳ:
ಕರ್ನಾಟಕ ಸರ್ಕಾರ ರೈತ ಸ್ನೇಹಿ ಕಾರ್ಯಕ್ರಮಗಳನ್ನು ಹೆಚ್ಚು ಮಾಡಲಿದೆ. ಕಳೆದ ವರ್ಷಕ್ಕಿಂತ ಈ ವರ್ಷ 10 ಲಕ್ಷ ರೈತರಿಗೆ ಹೆಚ್ಚಿನ ಸಾಲವನ್ನು ನೀಡುವುದರಿಂದ ಹಿಡಿದು, ಅನೇಕ ಕಾರ್ಯಕ್ರಮಗಳನು ರೂಪಿಸಿದೆ. ರೈತರು ಕೂಡ ವೈಜ್ಞಾನಿಕವಾಗಿ ಚಿಂತಿಸುವುದು, ಹೊಸ ತಳಿಗಳನ್ನು ಪ್ರಯೋಗ ಮಾಡುವುದು, ಉತ್ಪಾದನೆಯನ್ನು ಹೆಚ್ಚಿಸುವುದು ಹಾಗೂ ಸಮಗ್ರ ಕೃಷಿ ಕೈಗೊಳ್ಳಲು ಮುಂದಾಗಬೇಕು. ಹಾಗೂ ಕೃಷಿ ವಿವಿ ಮಾರ್ಗದರ್ಶಕವಾಗಬೇಕು. ಸರ್ಕಾರ ರೈತ ಮತ್ತು ರೈತರ ಮಕ್ಕಳ ಅಭಿವೃದ್ಧಿಗೆ ಬದ್ಧರಾಗಿ ಕೆಲಸ ಮಾಡುವುದಾಗಿ ಮುಖ್ಯಮಂತ್ರಿಗಳು ತಿಳಿಸಿದರು.
ತಾಯಿಯ ಗರ್ಭದಿಂದ ಭೂತಾಯಿಯ ಗರ್ಭದವರೆಗಿನ ಬದುಕು:
ಮಣ್ಣಿನಲ್ಲಿರುವ ವಿಸ್ಮಯಕಾರಿ, ಅಗಾಧ ಶಕ್ತಿ ಇದ್ದು, ಇದರೊಂದಿಗೆ ನಮ್ಮ ಬದುಕನ್ನು ಜೋಡಿಸಿಕೊಂಡಿದ್ದೇವೆ. ಬೇರ್ಯಾವ ಕ್ಷೇತ್ರದಲ್ಲಿಯೂ ಈ ರೀತಿ ಮಾಡಲು ಸಾಧ್ಯವಿಲ್ಲ. ಕಾರ್ಖಾನೆಗಳಲ್ಲಿ ನೂರು ಭಾಗಗಳನ್ನು ಸೇರಿಸಿ ಒಂದು ವಸ್ತು ತಯಾರಾಗುತ್ತದೆ. ಆದರೆ ಭೂಮಿ ಒಂದು ಕಾಳು ಹಾಕಿದರೆ ನೂರು ಕಾಳು ಭೂಮಿ ತಾಯಿ ನೀಡುತ್ತಾಳೆ. ಭೂಮಿ ತಾಯಿಯನ್ನು ನಮ್ಮ ಸ್ವಂತ ತಾಯಿಯ ರೀತಿ ನೋಡಿಕೊಳ್ಳಬೇಕು. ತಾಯಿಯ ಗರ್ಭದಿಂದ ಭೂತಾಯಿಯ ಗರ್ಭದವರೆಗೆ ನಮ್ಮ ಬದುಕು. ಇದರ ಅರಿವಿಲ್ಲದೇ ಕೃಷಿ ಅನಿವಾರ್ಯ ಎಂಬಂತೆ ಮಾಡಿದರೆ ಖಂಡಿತವಾಗಿ ದೇಶಕ್ಕೆ ಹಾಗೂ ನಮಗೆ ಒಳಿತಾಗುವುದಿಲ್ಲ. ಭಾವನಾತ್ಮಾಕ ಸಂಬಂಧಗಳನ್ನು ಇಟ್ಟುಕೊಳ್ಳಬೆಕಾಗುತ್ತದೆ. ಭಾವನೆಗಳಿದ್ದಲ್ಲಿ ಕ್ರಿಯಾತ್ಮಕ ಶಕ್ತಿ ಇರುತ್ತದೆ ಎಂದರು.
ಕೃಷಿ ನಮ್ಮ ನೆಲೆದ ಸಂಸ್ಕ್ರತಿ:
ಭಾವನಾತ್ಮಕ ಸಂಬಂಧವಿರುವುದರಿಂದ ವಿದ್ಯೆ ಕಲಿಸಲು ತಂದೆತಾಯಿಗಳು ತಮ್ಮ ಮಕ್ಕಳಿಗೆ ಹೇಗೆ ಶ್ರಮಿಸುತ್ತಾರೋ ಅದೇ ರೀತಿ ಕೃಷಿ, ರೈತರು, ಇಲಾಖೆ, ಪ್ರಾಧ್ಯಾಪಕರು, ವ್ಯಾಪಾರಸ್ಥರು ಇದ್ದಾರೆ. ಇದೊಂದು ದೊಡ್ಡ ಸಮುದಾಯ. ಬೀಜ ತರಾರಿಸುವುದರಿಮದ ಹಿಡಿದು ಉತ್ಪಾದನೆ, ಸಂಸ್ಕರಣೆ, ಮಾರಾಟದವರೆಗೆ ದೊಡ್ಡ ಸಮೂಹವಿದೆ. ಆದ್ದರಿಂದ ಕೃಷಿ ನಮ್ಮ ನೆಲೆದ ಸಂಸ್ಕøತಿ. ಆದ್ದರಿಂದ ಇದಕ್ಕೆ ಹೆಚ್ಚಿನ ಮಹತ್ವ ನೀಡುವುದು ಸರ್ಕಾರ ಮತ್ತು ಸಮಾಜ ಮಾಡಬೇಕಾಗುತ್ತದೆ. 130 ಕೋಟಿ ಜನಸಂಖ್ಯೆಗೆ ಆಹಾರ ನೀಡುವ ಮಟ್ಟಿಗೆ ದೇಶ ಸದೃಢವಾಗಲು ಕೃಷಿಕರ ಶ್ರಮ, ಸರ್ಕಾರದ ನೀತಿಗಳು ಕಾರಣವಾಗಿವೆ. ಆಹಾರದಲ್ಲಿ ಸ್ವಾವಲಂಬಿಯಾಗದ ದೇಶ ಸ್ವಾಭಿಮಾನಿಯಾಗಲು ಸಾಧ್ಯವಿಲ್ಲ. ಭಾರತ ಬಲಿಷ್ಠವಾಗಲು, ಸ್ವಾಭಿಮಾನಿಯಾಗಲು ರೈತರ ಬೆವರು, ಅವರು ನೀಡಿರುವ ಆಹಾರ ಭದ್ರತೆ ಕಾರಣ ಎಂದರು.
ಸಮಗ್ರ ಕೃಷಿಯನ್ನು ಸಮರೋಪಾದಿಯಲ್ಲಿ ಜಾರಿಗೆ ತಂದು ದೊಡ್ಡ ಬದಲಾವಣೆಯನ್ನು ತರಬೇಕು:
ಕೃಷಿ ಯೋಜನೆಗಳು ಕೃಷಿ ವಲಯಗಳಿಗೆ ಅನುಗುಣವಾಗಿ ಆಗಬೇಕು. ಸಮಗ್ರ ಕೃಷಿ ಪರಿಣಾಮಕಾರಿಯಾಗಿರುತ್ತದೆ. ಕೃಷಿ ಭೂಮಿ ಕಡಿಮೆಯಾಗುತ್ತಿದೆ. ಇದ್ದ ಬೂಮಿಯಲ್ಲಿ ಇತರೆ ಕೃಷಿ ಆಧಾರಿತ ಚಟುವಟಿಕೆ ಮಾಡಿದರೆ ಕೃಷಿಯನ್ನು ಲಾಭದಾಯಕವಾಗಿಸಬಹುದು. 2-3 ಎಕರೆಯಲ್ಲಿ ಉತ್ಪಾದನೆ ಮಾಡಲು ಸಾಧ್ಯವಿದೆ. ಇದನ್ನು ಪ್ರತಿ ರೈತನೂ ಮಾಡಿದಾಗ ರೈತರು ಅಭಿವೃದ್ಧಿಯಾಗಬಹುದು. ಸಮಗ್ರ ಕೃಷಿಯನ್ನು ಸಮರೋಪಾದಿಯಲ್ಲಿ ಜಾರಿಗೆ ತಂದು ದೊಡ್ಡ ಬದಲಾವಣೆಯನ್ನು ತರಬೇಕು ಎಂದರು.
ಗ್ರಾಮೀಣ ಸಾಲ ಪದ್ದತಿಯೂ ಬದಲಾವಣೆಯಾಗಬೇಕು:
ರೈತ ಉತ್ಪಾದಕ ಸಂಘಗಳು 8-10 ಕೋಟಿ ವಹಿವಾಟು ಮಾಡಿ ಲಾಭ ಮಾಡಿಕೊಂಡಿವೆ. ಮಧ್ಯವರ್ತಿಗಳಿಗೆ ಹೋಗುತ್ತಿದ್ದ ಹಣ, ಸಂಘಕ್ಕೇ ಉಳಿಯುತ್ತಿದೆ. ಅದಕ್ಕಾಗಿ ಮೀನುಗಾರಿಗೆ, ನೇಕಾರರ ಎಫ್.ಪಿ.ಒ ಗಳಿಗೂ ಸರ್ಕಾರ ಪ್ರೋತ್ಸಾಹ ನೀಡುತ್ತಿದೆ. ಗ್ರಾಮೀಣ ಸಾಲ ಪದ್ದತಿಯೂ ಬದಲಾವಣೆಯಾಗಬೇಕು. ನಬಾರ್ಡ್ ಜೊತೆಗೆ ಈ ಬಗ್ಗೆ ಮಾತನಾಡಿದ್ದು, ಸ್ಕೇಲ್ ಆಫ್ ಬ್ಯಾಲೆನ್ಸ್ ಬದಲಾಗಬೇಕೆಂದು ಒತ್ತಾಯ ಮಾಡಲಾಗಿದೆ ಎಂದರು. ಶೇ 80 % ರೈತರು ಸಣ್ಣ ರೈತರಿದ್ದಾರೆ. ಅವರಿಗೆ 8-10 ಲಕ್ಷ ದೊರೆತರೆ ಅನುಕೂಲವಾಗುತ್ತದೆ ಎಂದರು.
ಕೃಷಿಯ ವಿಚಾರದಲ್ಲಿ ರಾಜಕಾರಣವಾಗಬಾರದು:
ಕೃಷಿ ಬೆಳೆದಿದೆ, ಆದರೆ ರೈತ ಬೆಳೆದಿಲ್ಲ. ಈ ಬಗ್ಗೆ ಸ್ಪಷ್ಟ ನೀತಿ ಅಗತ್ಯವಿದೆ. ಕೃಷಿ ಅನಿಶ್ಚಿತತೆಯ ಬದುಕು. ಮಳೆಯ ಮೇಲೆ ಅವನ ಬದುಕು ಅವಲಂಬಿತವಾಗಿದೆ. ಮಳೆ ಬಾರದಿದ್ದರೂ, ಅತಿಯಾದ ಮಳೆಯಾದರೂ ನಷ್ಟ. ಕೊಳವೆಬಾವಿ ಕೊರೆಸಿದರೆ ವಿದ್ಯುತ್ ಸಂಪರ್ಕ, ವಿದ್ಯುತ್ ಸಂಪರ್ಕ ದೊರೆತರೆ ಎಷ್ಟು ದಿನ ಕೊಳವೆಬಾವಿ ಇರುತ್ತದೋ ತಿಳಿಯದ ಸ್ಥಿತಿ. ಪ್ರತಿಯೊಂದು ಅನಿಶ್ಚಿತತೆಯಿಂದ ಕೂಡಿದೆ. ರೈತರ ಬದುಕಿಗೆ ನಿಶ್ಚಿತತೆ ಇದ್ದರೆ ಮಾತ್ರ ಉತ್ಪಾದನೆ ಸಾಧ್ಯ, ಬೆಲೆ ಸಿಗಲು ಸಾಧ್ಯ. ಈ ಪ್ರಯೋಗವನ್ನು ಕರ್ನಟಕದಲ್ಲಿ ಮೊಟ್ಟಮೊದಲಿಗೆ ಮಾಡಿದರು ಕೃಷ್ಣ ಬೈರೇಗೌಡರ ತಂದೆ ಬೈರೇಗೌಡರು. ಈ ರಾಜ್ಯದ ಎಲ್ಲ ಭಾಗದಲ್ಲಿ ಬೆಳೆಯುವ ಬೆಳೆಗಳ ಬಗ್ಗೆ ಸಂಪೂರ್ಣವಾಗಿ ವ್ಯಾಖ್ಯಾನ ಮಾಡುವ ಶಕ್ತಿ ಅವರಲ್ಲಿತ್ತು. ಸಮಗ್ರ ಕೃಷಿ ನೀತಿ ವಿಧಾನ ಸಭೆಯಲ್ಲಿ ಮಂಡನೆಯಾದ ಸಂದರ್ಭದಲ್ಲಿ 3 ದಿನ ಸತತವಾಗಿ ಮಾತನಾಡಿ 4 ನೇ ದಿನ ತಮ್ಮ ಮಾತನ್ನು ಮುಕ್ತಾಯ ಮಾಡಿದ್ದನ್ನು ಮುಖ್ಯಮಂತ್ರಿಗಳು ಸ್ಮರಿಸಿದರು. ಕೃಷಿಕರು, ಕೃಷಿಯ ವಿಚಾರದಲ್ಲಿ ರಾಜಕಾರಣವಾಗಬಾರದು. ರೈತ ಯಾವುದೇ ಪಕ್ಷಕ್ಕೆ ಸೇರಿಲ್ಲ. ಆದರೆ ಎಲ್ಲಾ ಪಕ್ಷಗಳೂ ರೈತನಿಗೆ ಸೇರಿವೆ. ಸರ್ಕಾರ ನಡೆಸುವವರು ಇದನ್ನು ಮನಗಂಡಾಗ ಮಾತ್ರ ನಿರಂತರವಾಗಿ ರೈತರ ಏಳಿಗೆಗೆಗಾಗಿ ಕಾರ್ಯಕ್ರಮಗಳು ಆಗುತ್ತವೆ. ಕೃಷಿಕನ್ನು ಉದ್ಧಾರ ಮಾಡಲು ಸಂಶೋಧನೆಯ ಫಲವೂ ಬೇಕು. ವಿಶ್ವವಿದ್ಯಾಲಯಗಳು ಆವರಣದಿಂದ ಹೊರಗೆ ಬಂದು ಪ್ರಯೋಗ ಮಾಡಬೇಕು ಎಂದರು.
ಕೃಷಿ ಸಚಿವ ಬಿ.ಸಿ ಪಾಟೀಲ್, ಕಂದಾಯ ಸಚಿವ ಆರ್. ಅಶೋಕ್, ಶಾಸಕ ಕೃಷ್ಣ ಬೈರೇಗೌಡ, ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ, ಎಸ್.ವಿ.ಸುರೇಶ್, ಹನುಮಂತಪ್ಪ ಉಪಸ್ಥಿತರಿದ್ದರು.