ಬೆಂಗಳೂರು: ಮಾಗಡಿ ತಾಲೂಕಿನ ಬಂಡೆ ಮಠದ ಬಸವಲಿಂಗ ಸ್ವಾಮೀಜಿ ಅವರು ನೇಣಿಗೆ ಶರಣಾಗುವ ಮುನ್ನ ಕೆಲವರ ಜೊತೆಗೆ ಫೋನ್ ಸಂಭಾಷಣೆ ನಡೆಸಿರುವುದು ರಾಮನಗರ ಜಿಲ್ಲಾ ಪೊಲೀಸರ ತನಿಖೆಯಲ್ಲಿ ಪತ್ತೆಯಾಗಿದೆ.
ರಾತ್ರಿ 2 ಗಂಟೆಯಿಂದ 4 ಗಂಟೆಯ ಅವಧಿಯಲ್ಲಿ ಸ್ವಾಮೀಜಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಇದಕ್ಕೂ ಮುನ್ನ ರಾತ್ರಿ 1:30 ರವರೆಗೂ ಸ್ವಾಮೀಜಿ ಪ್ರಭಾವಿ ಮುಖಂಡನ ಜೊತೆಗೆ ಫೋನ್ ಸಂಭಾಷಣೆ ನಡೆಸಿರುವುದು ತನಿಖೆಯಲ್ಲಿ ಗೊತ್ತಾಗಿದೆ.
ಈ ಹಿನ್ನೆಲೆಯಲ್ಲಿ ಪೊಲೀಸರು ಸ್ವಾಮೀಜಿ ಅವರ ಮೊಬೈಲ್ ನಂಬರ್ ಕಾಲ್ ವಿವರಗಳನ್ನು ಪರಿಶೀಲನೆ ಮಾಡುತ್ತಿದ್ದು, ಸ್ವಾಮೀಜಿಗೆ ಬಂದಿರುವ ಕೊನೆಯ ಕಾಲ್ ಮೇಲೆ ಅನುಮಾನಗಳು ಹೆಚ್ಚಾಗಿವೆ. ಇದರ ಜೊತೆಗೆ ಸ್ವಾಮೀಜಿಯೊಂದಿಗೆ ನಿರಂತರ ಸಂಪರ್ಕ ಹೊಂದಿದ್ದವರ ಬಗ್ಗೆ ಸಹ ಮಾಹಿತಿ ಸಂಗ್ರಹಿಸಲು ಕಾಲ್ ಡೀಟೈಲ್ಸ್ ನೆರವಾಗಿದೆ.
ಇನ್ನು ಪೊಲೀಸರು ಸ್ವಾಮೀಜಿ ಆತ್ಮಹತ್ಯೆ ಮಾಡಿಕೊಂಡ ಕೊಠಡಿ ಸೀಲ್ ಮಾಡಿದ್ದಾರೆ. ಬಸವಲಿಂಗ ಸ್ವಾಮೀಜಿ ಮೊಬೈಲ್, ಡೈರಿ, ಡೆತ್ ನೋಟ್ ಜಪ್ತಿ ಮಾಡಿ ಮೊಬೈಲ್ ನಲ್ಲಿರುವ ಮಾಹಿತಿ ಕಲೆ ಹಾಕಲು ವಿಧಿ ವಿಜ್ಞಾನ ಪ್ರಯೋಗಾಲಯ (ಎಫ್.ಎಸ್.ಎಲ್.) ಕ್ಕೆ ರವಾನಿಸಿದ್ದಾರೆ. ಎಫ್ಎಸ್ಎಲ್ ವರದಿ ಆಧರಿಸಿ ಮುಂದಿನ ತನಿಖೆ ನಡೆಸಲಾಗುತ್ತದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ತನಿಖೆಗೆ ಆಗ್ರಹ:
ಬಸವಲಿಂಗ ಶ್ರೀ ಆತ್ಮಹತ್ಯೆ ಪ್ರಕರಣ ಸಂಬಂಧ ಸೂಕ್ತ ತನಿಖೆ ಮಾಡುವಂತೆ ಸಿದ್ಧಗಂಗಾ ಶ್ರೀಗಳು ಪೊಲೀಸರಿಗೆ ಮನವಿ ಮಾಡಿದ್ದಾರೆ.
ಬಸವಲಿಂಗ ಶ್ರೀಗಳು ಸಿದ್ದಗಂಗಾ ಮಠದ ಸಿದ್ದಲಿಂಗ ಶ್ರೀಗಳ ಜೊತೆ ನಿಕಟ ಸಂಬಂಧ ಹೊಂದಿದ್ದರು. ಮೊನ್ನೆ ರಾತ್ರಿ ವಿದೇಶದಿಂದ ಆಗಮಿಸಿದ್ದ ಸಿದ್ದಗಂಗಾ ಶ್ರೀಗಳನ್ನು ಭೇಟಿ ಮಾಡಲು ಬಂಡೆಮಠದ ಶ್ರೀಗಳು ಹೋಗಿರಲಿಲ್ಲ. ತಮ್ಮ ಕಾರಿನ ಚಾಲಕನಿಗೆ ಬೆಳಗಿನ ಜಾವ 3 ಗಂಟೆಗೆ ಹೋಗೋಣಾ ಅಂದಿದ್ದರಂತೆ. ಸದ್ಯ ಪ್ರಕರಣ ಸಂಬಂಧ ಸೂಕ್ತ ತನಿಖೆ ಮಾಡುವಂತೆ ಪೊಲೀಸರಿಗೆ ಸಿದ್ದಗಂಗಾ ಶ್ರೀಗಳು ಮನವಿ ಮಾಡಿದ್ದಾರೆ.