ಬಾರ್ಸಿಲೋನಾ ತಂಡದ ಮುಖ್ಯ ಕೋಚ್ ಆಗಿ ಕ್ಸಾವಿ ಹೆರ್ನಾಂಡಿಸ್ ನೇಮಕ

Prasthutha|

ಬಾರ್ಸಿಲೋನಾ: ಪ್ರಮುಖ ಸ್ಪ್ಯಾನಿಷ್ ಕ್ಲಬ್ ಬಾರ್ಸಿಲೋನಾ ತಂಡದ ಮುಖ್ಯ ಕೋಚ್ ಆಗಿ ತಂಡದ ಮಾಜಿ ಲೆಜೆಂಡ್ ಆಟಗಾರ ಕ್ಸಾವಿ ಹೆರ್ನಾಂಡಿಸ್ ನೇಮಕವಾಗಿದ್ದಾರೆ. ತಕ್ಷಣದಿಂದಲೇ ಜಾರಿಗೆ ಬರುವಂತೆ ಕ್ಸಾವಿ ಅವರೊಂದಿಗೆ ಒಪ್ಪಂದ  ಮಾಡಿಕೊಳ್ಳಲಾಗಿದ್ದು, ಮುಂದಿನ ಎರಡು ಅವಧಿಗೆ ಕ್ಸಾವಿ ಬಾರ್ಸಿಲೋನಾ ತಂಡದ ಮುಖ್ಯ ಕೋಚ್ ಆಗಿರಲಿದ್ದಾರೆ.

- Advertisement -

ಕ್ಸಾವಿಯ ನೇಮಕಾತಿಯನ್ನು ಬಾರ್ಸಿಲೋನಾ ಕ್ಲಬ್ ತನ್ನ ಅಧಿಕೃತ ಟ್ವಿಟರ್ ಖಾತೆ ಹಾಗೂ ವೆಬ್’ಸೈಟ್’ನಲ್ಲಿ ಪ್ರಕಟಿಸಿದೆ.   ಬಾರ್ಸಿಲೋನಾ ನೇಮಕದ ಬೆನ್ನಲ್ಲೇ ಕ್ಸಾವಿ, ಸದ್ಯ ತರಬೇತುದಾರನಾಗಿರುವ ಖತಾರ್ ಕ್ಲಬ್ ಅಲ್ ಸದ್ದ ಫುಟ್ಬಾಲ್ ಕ್ಲಬ್’ ತೊರೆಯಲಿದ್ದಾರೆ. ನವೆಂಬರ್ 8ರಂದು ಕ್ಯಾಂಪ್ ನೌ ಮೈದಾನದಲ್ಲಿ ಮುಖ್ಯ ಕೋಚ್ ನೇಮಕಾತಿಯ ಘೋಷಣಾ ಕಾರ್ಯಕ್ರಮ ನಡೆಯಲಿದ್ದು, ಅಭಿಮಾನಿಗಳಿಗೆ ಮೈದಾನಕ್ಕೆ ಪ್ರವೇಶಿಸಲು ಅವಕಾಶ ನೀಡಲಾಗಿದೆ.

1998ರಿಂದ 2015ರವರೆಗೆ ತನ್ನ ವೃತ್ತಿ ಜೀವನದ ಅಮೂಲ್ಯ 17 ವರ್ಷಗಳನ್ನು ಬಾರ್ಸಿಲೋನಾ ಕ್ಲಬ್’ನಲ್ಲೇ ಕಳೆದಿದ್ದ ಕ್ಸಾವಿ, ಬಾರ್ಸಿಲೋನಾ ಜೆರ್ಸಿಯಲ್ಲಿ ಒಟ್ಟು 767 ಪಂದ್ಯಗಳನ್ನಾಡಿ 25 ಕೂಟಗಳಲ್ಲಿ ಚಾಂಪಿಯನ್ ಪಟ್ಟದಲ್ಲಿ ಸಂಭ್ರಮಿಸಿದ್ದರು. 778 ಪಂದ್ಯಗಳನ್ನಾಡಿರುವ ಲಿಯಾನೆಲ್ ಮೆಸ್ಸಿ ಕ್ಸಾವಿಗಿಂತ ಮೊದಲಿನ ಸ್ಥಾನದಲ್ಲಿದ್ದಾರೆ. ಆದರೆ ಮೆಸ್ಸಿ ಕ್ಲಬ್ ತೊರೆದು ಪಿಎಸ್’ಜಿ ಪಾಳೆಯ ಸೇರಿದ್ದಾರೆ.

- Advertisement -

ಲಾ ಲೀಗ ಟೂರ್ನಿಯಲ್ಲಿ ಬಾರ್ಸಿಲೋನಾ ತಂಡದ ಕಳಪೆ ಪ್ರದರ್ಶನ ಮುಂದುವರಿದ ಹಿನ್ನೆಲೆಯಲ್ಲಿ ತಂಡದ ಮುಖ್ಯ ಕೋಚ್ ಹುದ್ದೆಯಿಂದ ರೊನಾಲ್ಡ್ ಕೋಮನ್’ರನ್ನು ಸೆಪ್ಟಂಬರ್’ ಅಂತ್ಯದಲ್ಲಿ ಕೈ ಬಿಡಲಾಗಿತ್ತು.

ಬಾರ್ಸಿಲೋನಾ ತಂಡ ಆಡಿರುವ ಕಳೆದ 4 ಪಂದ್ಯಗಳಲ್ಲಿ 3ರಲ್ಲೂ ಸೋಲು ಅನುಭವಿಸಿದೆ. ಚಾಂಪಿಯನ್ಸ್ ಲೀಗ್’ನ ಗ್ರೂಪ್ ಹಂತದ ಎರಡು ಪಂದ್ಯಗಳಲ್ಲಿ ಬಾರ್ಸಿಲೋನಾ ಮುಗ್ಗರಿಸಿತ್ತು. ಪ್ರತಿಷ್ಠಿತ ಎಲ್ ಕ್ಲಾಸಿಕೋ ಪಂದ್ಯದಲ್ಲಿ ಬದ್ಧವೈರಿ ರಿಯಾಲ್ ಮ್ಯಾಡ್ರಿಡ್ ವಿರುದ್ಧ 1-2 ಗೋಲುಗಳ ಅಂತರದಲ್ಲಿ ಬಾರ್ಸಿಲೋನಾ ಶರಣಾಗಿತ್ತು.

ಲಾ ಲೀಗಾದ ಪ್ರಸಕ್ತ ಸೀಸನ್’ನಲ್ಲಿ 10 ಪಂದ್ಯಗಳನ್ನು ಆಡಿರುವ ಬಾರ್ಸಿಲೋನಾ, 4 ಜಯ, 5 ಡ್ರಾ ಹಾಗೂ 1 ಪಂದ್ಯಗಳಲ್ಲಿ ಸೋಲು ಕಾನು ಮೂಲಕ 15 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದೆ. ಬಾರ್ಸಿಲೋನಾದ ಬದ್ಧವೈರಿ ರಿಯಾಲ್ ಮ್ಯಾಡ್ರಿಡ್ ಕ್ಲಬ್ 10 ಪಂದ್ಯಗಳಲ್ಲಿ 21 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.



Join Whatsapp