ಬಂಟ್ವಾಳ: ಭಾರೀ ಪ್ರಮಾಣದಲ್ಲಿ ತುಂಬಿ ಹರಿದ ನೇತ್ರಾವತಿ, ತಗ್ಗು ಪ್ರದೇಶಗಳು ಜಲಾವೃತ

Prasthutha|

ಬಂಟ್ವಾಳ: ನಿರಂತರವಾಗಿ ಸುರಿಯುತ್ತಿರುವ ಮಳೆಯ ಪರಿಣಾಮ ನೇತ್ರಾವತಿ ನದಿ ಹೆಚ್ಚಿನ ಪ್ರಮಾಣದಲ್ಲಿ ತುಂಬಿ ಹರಿಯುತ್ತಿದ್ದು, ಬಂಟ್ವಾಳ ತಾಲೂಕಿನ ಹಲವೆಡೆ ತಗ್ಗು ಪ್ರದೇಶಗಳು ಜಲಾವೃತಗೊಂಡಿದೆ. ಕೆಲವು ಕಡೆ ರಸ್ತೆ ಸಂಚಾರ ಕಡಿತಗೊಂಡಿತ್ತು.

- Advertisement -

ಬಂಟ್ವಾಳದಲ್ಲಿ ನದಿ ನೀರಿನ ಅಪಾಯಕಾರಿ ಮಟ್ಟ 8.5 ಮೀ. ಆಗಿದ್ದು, ಶುಕ್ರವಾರ ಮಧ್ಯಾಹ್ನದ ವೇಳೆಗೆ ನೀರಿನ ಮಟ್ಟ ಏಕಾಏಕಿ ಏರಿಕೆಯಾಗಿ 8.6 ಮೀ.ಗೆ ತಲುಪಿತ್ತು. ಹೀಗಾಗಿ ಬಂಟ್ವಾಳ ಬಡ್ಡಕಟ್ಟೆಯಲ್ಲಿ ಸಾಕಷ್ಟು ಅಂಗಡಿಗಳು, ಮೀನು ಮಾರುಕಟ್ಟೆ, ಸಾರ್ವಜನಿಕ ಶೌಚಾಲಯಗಳು ಜಲಾವೃತಗೊಂಡವು. ಪಾಣೆಮಂಗಳೂರಿನ ಆಲಡ್ಕದಲ್ಲಿ ಜು. 18ರಂದೇ ಮನೆಗಳು ಮುಳುಗಡೆಯಾಗಿದ್ದು, ಅಲ್ಲೂ ನೀರಿನ ಪ್ರಮಾಣ ಹೆಚ್ಚಾಗಿತ್ತು.

ಅಜಿಲಮೊಗರು ಮಸೀದಿ ಆವರಣಕ್ಕೆ ನೀರು ಬಂದು ಅಜಿಲಮೊಗರು-ಉಪ್ಪಿನಂಗಡಿ ರಸ್ತೆಯ ಸಂಚಾರ ಕಡಿತಗೊಂಡಿತ್ತು. ಬಂಟ್ವಾಳ ಪೇಟೆಗೆ ಸಂಪರ್ಕ ರಸ್ತೆಯ ಕೋಟೆಕಣಿ, ಬಸ್ತಿಪಡು³-ಗೂಡಿನಬಳಿ ಸಂಪರ್ಕ ರಸ್ತೆಯ ಕಂಚಿಗಾರಪೇಟೆ, ಪಾಣೆಮಂಗಳೂರು-ಮೆಲ್ಕಾರ್‌ ಸಂಪರ್ಕ ಆಲಡ್ಕ ಸೇತುವೆ ಬಳಿ ರಸ್ತೆಗೆ ನೀರು ಹರಿದ ಪರಿಣಾಮ ಸರಪಾಡಿ-ಬೀಯಪಾದೆ ಸಂಪರ್ಕ ಕಡಿತಗೊಂಡಿತ್ತು.

- Advertisement -

ತಾಲೂಕಿನ ಮಣಿನಾಲ್ಕೂರು, ಸರಪಾಡಿ, ಬರಿಮಾರು, ನಾವೂರು, ಸಜೀಪಮುನ್ನೂರು, ನರಿಕೊಂಬು, ಬಾಳ್ತಿಲ, ಶಂಭೂರು, ಕಡೇಶ್ವಾಲ್ಯ ಗ್ರಾಮಗಳಲ್ಲಿ ತಗ್ಗು ಪ್ರದೇಶಗಳು ಜಲಾವೃತಗೊಂಡಿದ್ದು, ಭತ್ತದ ಗದ್ದೆಗಳು, ಅಡಿಕೆ ತೋಟಗಳಿಗೆ ನೀರು ನುಗ್ಗಿತ್ತು.

ದ.ಕ.ಜಿಲ್ಲಾಧಿಕಾರಿ ಮುಗಿಲನ್‌, ಇತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಬಂಟ್ವಾಳಕ್ಕೆ ಭೇಟಿ ನೀಡಿ ನೆರೆಬಾಧಿತ ಪ್ರದೇಶಗಳನ್ನು ಪರಿಶೀಲಿಸಿದ್ದಾರೆ.



Join Whatsapp