►ಅಧ್ಯಕ್ಷ ಚುನಾವಣೆಗೆ ಸ್ಪರ್ಧಿಸಲು ಎಸ್‌ಡಿಪಿಐ ನಿರ್ಧಾರ, ಕಾಂಗ್ರೆಸ್ ಬೆಂಬಲದ ನಿರೀಕ್ಷೆಯಲ್ಲಿ ಎಸ್‌ಡಿಪಿಐ
►ಕಾಂಗ್ರೆಸ್ ಬೆಂಬಲಿಸದಿದ್ದರೆ ನಮ್ಮ ರಾಜಕೀಯ ನಾವು ಮಾಡುತ್ತೇವೆ: ಎಸ್‌ಡಿಪಿಐ
ದಕ್ಷಿಣ ಕನ್ನಡ : ಬಂಟ್ವಾಳ ಪುರಸಭೆಯ ಎರಡನೇ ಅವಧಿಯ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆಯು ನಾಳೆ (ಆಗಸ್ಟ್ 22) ನಡೆಯಲಿದ್ದು, ಈ ಬಾರಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ಎಸ್‌ಡಿಪಿಐ ನಿರ್ಧರಿಸಿರುವುದು ತೀವ್ರ ಕುತೂಹಲ ಕೆರಳಿಸಿದೆ.
ಬಂಟ್ವಾಳ ಪುರಸಭೆಯಲ್ಲಿ ಕಿಂಗ್‌ಮೇಕರ್ ಆಗಿರುವ ಎಸ್‌ಡಿಪಿಐ ಈ ಬಾರಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವುದು ಖಚಿತವಾಗಿದೆ. ಎಸ್‌ಡಿಪಿಐ ಸ್ಲರ್ಧೆಯನ್ನು ಎಸ್‌ಡಿಪಿಐ ದ.ಕ ಜಿಲ್ಲಾಧ್ಯಕ್ಷ ಅನ್ವರ್ ಸಾದತ್ ಬಜತ್ತೂರು ಖಚಿತಪಡಿಸಿದ್ದಾರೆ.
ಸಾಮಾನ್ಯ ವರ್ಗಕ್ಕೆ ಮೀಸಲಾಗಿರುವ ಅಧ್ಯಕ್ಷ ಸ್ಥಾನಕ್ಕೆ, ಬಂಟ್ವಾಳ ಪುರಸಭೆಯ ಜನಪ್ರಿಯ ಕೌನ್ಸಿಲರ್ ಮೂನಿಶ್ ಅಲಿ ಎಸ್‌ಡಿಪಿಐ ಅಭ್ಯರ್ಥಿಯಾಗಲಿದ್ದಾರೆ ಎಂದು ತಿಳಿದುಬಂದಿದೆ. ಹಿಂದುಳಿದ ವರ್ಗ ಎ ಗೆ ಮೀಸಲಾಗಿರುವ ಉಪಾಧ್ಯಕ್ಷ ಸ್ಥಾನಕ್ಕೂ ಎಸ್‌ಡಿಪಿಐ ಸ್ಪರ್ಧೆ ಮಾಡುವ ಸಾಧ್ಯತೆ ಇದೆ.
27 ಸದಸ್ಯ ಬಲದ ಬಂಟ್ವಾಳ ಪುರಸಭೆಯಲ್ಲಿ ಕಾಂಗ್ರೆಸ್ 12 ಸ್ಥಾನ ಹೊಂದಿತ್ತು. ಕಾಂಗ್ರೆಸ್ ಸದಸ್ಯ ಗಂಗಾಧರ ಪೂಜಾರಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರ್ಪಡೆಯಾಗಿದ್ದು, ಕಾಂಗ್ರೆಸ್ ಬಲ 11ಕ್ಕೆ ಕುಸಿದಿದೆ. ಬಿಜೆಪಿ 11 ಹಾಗೂ ಎಸ್‌ಡಿಪಿಐ 4 ಸದಸ್ಯರ ಬಲ ಹೊಂದಿದೆ. ಸದ್ಯ 26 ಸದಸ್ಯ ಬಲದ ಪುರಸಭೆಯಲ್ಲಿ ಬಹುಮತಕ್ಕೆ 14 ಮತಗಳು ಬೇಕಾಗಿದ್ದು, 11 ಸ್ಥಾನ ಹೊಂದಿರುವ ಬಿಜೆಪಿಗೆ ಸ್ಥಳೀಯ ಶಾಸಕರು ಮತ್ತು ಸಂಸದರ ಮತ ಸೇರಿ 13 ಮತಗಳಿವೆ. ಕಾಂಗ್ರೆಸ್ ಮತ್ತು ಎಸ್‌ಡಿಪಿಐ ಮೈತ್ರಿ ಸಾಧಿಸಿದರೆ 15 ಮತಗಳ ಬಹುಮತದ ಮೂಲಕ ಅಧಿಕಾರ ಹಿಡಿಯಲು ಅವಕಾಶ ಇದೆ.
ಬಂಟ್ವಾಳ ಪುರಸಭೆಯಲ್ಲಿ ಬಿಜೆಪಿ ಆಪರೇಷನ್ ಕಮಲದ ಮೂಲಕ ಅಧಿಕಾರ ಹಿಡಿಯುವ ಪ್ರಯತ್ನದಲ್ಲಿದ್ದು, ಕಾಂಗ್ರೆಸ್ ಕೂಡ ಎಸ್‌ಡಿಪಿಐ ಬೆಂಬಲದಿಂದ ಅಧಿಕಾರ ಉಳಿಸಿಕೊಳ್ಳುವ ಪ್ರಯತ್ನದಲ್ಲಿದೆ. ಈ ಮಧ್ಯೆ ಕಿಂಗ್‌ಮೇಕರ್ ಎಸ್‌ಡಿಪಿಐ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ತೀರ್ಮಾನಿಸಿದ್ದು, ಈ ಬಾರಿ ಕಾಂಗ್ರೆಸ್ ಸದಸ್ಯರು ಎಸ್‌ಡಿಪಿಐ ಅಭ್ಯರ್ಥಿಯನ್ನು ಬೆಂಬಲಿಸುವಂತೆ ಎಸ್‌ಡಿಪಿಐ ವಿನಂತಿಸಿದೆ. ಇದರಿಂದ ಚುನಾವಣಾ ಚಿತ್ರಣವೇ ಬದಲಾಗಿದ್ದು ಫಲಿತಾಂಶ ಏನಾಗಬಹುದು ಎಂಬ ಕಾತರ ಹೆಚ್ಚಾಗಿದೆ.
ಪುರಸಭೆಯ ಮೊದಲ ಅವಧಿಯ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆಯ ವೇಳೆ ಬಿಜೆಪಿಯವರು ಕಾಂಗ್ರೆಸ್ ಸದಸ್ಯರನ್ನು ಸೆಳೆದು
ಆಪರೇಷನ್ ಕಮಲದ ಮೂಲಕ ಅಧಿಕಾರ ಹಿಡಿಯಲು ಪ್ರಯತ್ನ ನಡೆಸಿದ್ದರು. ಅಂದು ಬಿಜೆಪಿಯ ಕಾರ್ಯಾಚರಣೆಯನ್ನು ವಿಫಲಗೊಳಿಸಿ ಅವರನ್ನು ಅಧಿಕಾರದಿಂದ ದೂರವಿಡಲು ಎಸ್‌ಡಿಪಿಐ ಸದಸ್ಯರು ಕಾಂಗ್ರೆಸ್ ಅಭ್ಯರ್ಥಿಯನ್ನು ಬೆಂಬಲಿಸಿದ್ದರು. ಎಸ್‌ಡಿಪಿಐ ಬೆಂಬಲದಿಂದ ಕಾಂಗ್ರೆಸ್ ಮೊದಲ ಅವಧಿಯಲ್ಲಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿತ್ತು. ಮೊದಲ ಅವಧಿಯ ಅಧ್ಯಕ್ಷರಾಗಿ ಕಾಂಗ್ರೆಸ್‌ನ ಮಹಮ್ಮದ್ ಷರೀಫ್ ಮತ್ತು ಉಪಾಧ್ಯಕ್ಷರಾಗಿ ಜೆಸಿಂತ ಡಿಸೋಜಾ ಆಯ್ಕೆಯಾಗಿದ್ದರು.
ಈ ಕುರಿತು ಪ್ರಸ್ತುತ ನ್ಯೂಸ್‌ಗೆ ಪ್ರತಿಕ್ರಿಯಿಸಿರುವ ಅನ್ವರ್ ಸಾದತ್ ಬಜತ್ತೂರು, ‘ಕಳೆದ ಬಾರಿ ನಾವು ಕಾಂಗ್ರೆಸ್‌ಗೆ ಬೆಂಬಲ ನೀಡಿ ಅಧಿಕಾರ ನೀಡಿದ್ದು, ಆ ಉಪಕಾರ ಸ್ಮರಣೆಗಾಗಿ ಈ ಬಾರಿ ಕಾಂಗ್ರೆಸ್ ನಮ್ಮನ್ನು ಬೆಂಬಲಿಸುವ ನಿರೀಕ್ಷೆ ಇದೆ’ ಎಂದರು. ‘ನಾವು ಈಗಾಗಲೇ ಕಾಂಗ್ರೆಸ್ ನಾಯಕರು ಮತ್ತು ಕೌನ್ಸಿಲರ್‌ಗಳನ್ನು ಭೇಟಿಯಾಗಿ ಎಸ್‌ಡಿಪಿಐ ಅಭ್ಯರ್ಥಿಯನ್ನು ಬೆಂಬಲಿಸುವಂತೆ ಕೇಳಿಕೊಂಡಿದ್ದೇವೆ, ಕಾಂಗ್ರೆಸ್ ಕಡೆಯಿಂದ ಮಿಶ್ರ ಪ್ರತಿಕ್ರಿಯೆ ಬಂದಿದ್ದು, ಅವರು ಬೆಂಬಲಿಸುವ ನಿರೀಕ್ಷೆ ಇದೆ’ ಎಂದರು. ‘ಕಾಂಗ್ರೆಸ್ ನಮ್ಮನ್ನು ಬೆಂಬಲಿಸದಿದ್ದರೆ ನಮ್ಮ ರಾಜಕೀಯ ನಾವು ಮಾಡುತ್ತೇವೆ’ ಎಂದು ಹೇಳಿದರು.