ಅಧ್ಯಕ್ಷ- ಉಪಾಧ್ಯಕ್ಷ ಚುನಾವಣೆಯಲ್ಲಿ ಫಲಿಸಿದ ಕಾಂಗ್ರೆಸ್-SDPI ಮೈತ್ರಿ : ಬಿಜೆಪಿಗೆ ಮುಖಭಂಗ
ಪುರಸಭೆ ಉಪಾಧ್ಯಕ್ಷರಾಗಿ ಇತಿಹಾಸ ಸೃಷ್ಟಿಸಿದ SDPI ಕೌನ್ಸಿಲರ್ ಮೂನಿಶ್ ಅಲಿ
ಬಂಟ್ವಾಳ: ಪುರಸಭೆಯ ಎರಡನೇ ಅವಧಿಯ ಅಧ್ಯಕ್ಷ -ಉಪಾಧ್ಯಕ್ಷ ಚುನಾವಣೆಯು ಇಂದು ನಡೆದಿದ್ದು, ಅಧ್ಯಕ್ಷರಾಗಿ ಕಾಂಗ್ರೆಸ್ ಪಕ್ಷದ ವಾಸು ಪೂಜಾರಿ ಹಾಗೂ ಉಪಾಧ್ಯಕ್ಷರಾಗಿ ಎಸ್‌ಡಿಪಿಐ ಪಕ್ಷದ ಮೂನಿಶ್ ಅಲಿ ಆಯ್ಕೆಯಾಗಿದ್ದಾರೆ.
ಮೂನಿಶ್ ಅಲಿ, ದಕ್ಷಿಣ ಕನ್ನಡ ಜಿಲ್ಲೆಯ ಮುನ್ಸಿಪಾಲಿಟಿ ಮಟ್ಟದಲ್ಲಿ ಅಧಿಕಾರಕ್ಕೇರಿದ ಮೊಟ್ಟಮೊದಲ ಎಸ್‌ಡಿಪಿಐ ಕೌನ್ಸಿಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಬಂಟ್ವಾಳ ಪುರಸಭೆಯಲ್ಲಿ ಕಿಂಗ್ ಮೇಕರ್ ಆಗಿರುವ SDPI ಕಾಂಗ್ರೆಸ್ ಗೆ ಬೆಂಬಲ ನೀಡಿದ್ದು, ಕಾಂಗ್ರೆಸ್ ಎರಡನೇ ಅವಧಿಗೂ ಅಧಿಕಾರದ ಗದ್ದುಗೆ ಏರಿದೆ. ಉಪಾಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಎಸ್ ಡಿಪಿಐ ಅಭ್ಯರ್ಥಿಗೆ ಕಾಂಗ್ರೆಸ್ ಬೆಂಬಲಿಸಿದೆ.
ಅಧ್ಯಕ್ಷ ಸ್ಥಾನದ ಚುನಾವಣೆಗೆ ಬಿಜೆಪಿಯ ಎ.ಗೋವಿಂದ ಪ್ರಭು, ಕಾಂಗ್ರೆಸ್ ನಿಂದ ವಾಸು ಪೂಜಾರಿ ಲೊರೆಟ್ಟೊ ಮತ್ತು ಎಸ್ ಡಿಪಿಐ ಪಕ್ಷದ ಮಹಮ್ಮದ್ ಇದ್ರೀಶ್ ಪಿ.ಜೆ ನಾಮಪತ್ರ ಸಲ್ಲಿಸಿದ್ದರು. ಕೊನೆಯ ಕ್ಷಣದಲ್ಲಿ ಇದ್ರೀಶ್ ಪಿ.ಜೆ ನಾಮಪತ್ರ ವಾಪಾಸ್ ಪಡೆದರು. ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿಯಿಂದ ಹರಿಪ್ರಸಾದ್ ಹಾಗೂ ಎಸ್‌ಡಿಪಿಐ ಪಕ್ಷದ ಮೂನಿಶ್ ಆಲಿ ನಾಮಪತ್ರ ಸಲ್ಲಿಸಿದರು.
ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಎಸ್‌ಡಿಪಿಐಯ ನಾಲ್ವರು ಸದಸ್ಯರು ಕಾಂಗ್ರೆಸ್ ಅಭ್ಯರ್ಥಿಗೆ ಬೆಂಬಲಿಸಿದರು. ಉಪಾಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಕಣಕ್ಕಿಳಿಸದೇ ಎಸ್‌ಡಿಪಿಐ ಅಭ್ಯರ್ಥಿಗೆ ಬೆಂಬಲಿಸಿದೆ. ಅಧ್ಯಕ್ಷ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ 15 ಮತಗಳನ್ನು ಪಡೆದರೆ, ಬಿಜೆಪಿ ಅಭ್ಯರ್ಥಿ 13 ಮತಗಳನ್ನು ಪಡೆದರು. ಉಪಾಧ್ಯಕ್ಷ ಚುನಾವಣೆಯಲ್ಲಿ ಎಸ್ ಡಿ ಪಿಐ ಅಭ್ಯರ್ಥಿ 15 ಮತಗಳನ್ನು ಪಡೆದರೆ, ಬಿಜೆಪಿ ಅಭ್ಯರ್ಥಿ 13 ಮತಗಳನ್ನು ಪಡೆದು ಸೋಲನುಭವಿಸಿದರು. ಉಪಾಧ್ಯಕ್ಷ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ 11 ಸದಸ್ಯರು ಎಸ್ ಡಿಪಿಐ ಅಭ್ಯರ್ಥಿಗೆ ಬೆಂಬಲಿಸಿದರು. ಕಾಂಗ್ರೆಸ್-ಎಸ್ ಡಿಪಿಐ ಮೈತ್ರಿ ಫಲಿಸಿದ್ದು, ಬಿಜೆಪಿ ಮುಖಭಂಗ ಅನುಭವಿಸಿದೆ.
27 ಸದಸ್ಯ ಬಲದ ಬಂಟ್ವಾಳ ಪುರಸಭೆಯಲ್ಲಿ ಕಾಂಗ್ರೆಸ್ 12 ಸ್ಥಾನ ಹೊಂದಿತ್ತು. ಕಾಂಗ್ರೆಸ್ ಸದಸ್ಯ ಗಂಗಾಧರ ಪೂಜಾರಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರ್ಪಡೆಯಾಗಿದ್ದು, ಕಾಂಗ್ರೆಸ್ ಬಲ 11ಕ್ಕೆ ಕುಸಿದಿತ್ತು. ಬಿಜೆಪಿಗೆ 11 ಸದಸ್ಯರು ಮತ್ತು ಸ್ಥಳೀಯ ಶಾಸಕರು ಮತ್ತು ಸಂಸದರ ಮತ 13 ಮತಗಳಿದ್ದವು. ಎಸ್ ಡಿಪಿಐ 4 ಸದಸ್ಯರ ಬಲ ಹೊಂದಿದೆ.
ಪುರಸಭೆಯ ಪ್ರಥಮ ಅವಧಿಯಲ್ಲಿ ಎಸ್ಡಿಪಿಐ ಬೆಂಬಲದೊಂದಿಗೆ ಕಾಂಗ್ರೆಸ್ ಅಧಿಕಾರವನ್ನು ಪಡೆದುಕೊಂಡು ಮಹಮ್ಮದ್ ಶರೀಫ್ ಅಧ್ಯಕ್ಷರಾಗಿ, ಜೆಸಿಂತ ಡಿಸೋಜ ಉಪಾಧ್ಯಕ್ಷರಾಗಿದ್ದರು. 2ನೇ ಅವಧಿಗೂ ಎಸ್ ಡಿಪಿಐ ಬೆಂಬಲದೊಂದಿಗೆ ಕಾಂಗ್ರೆಸ್ ಅಧಿಕಾರಕ್ಕೇರಿದೆ.