ಢಾಕಾ: ಬಾಂಗ್ಲಾದೇಶದ ಜಮಾಅತೇ ಇಸ್ಲಾಮಿ ಪಕ್ಷ ಹಾಗೂ ಅದರ ವಿದ್ಯಾರ್ಥಿ ಘಟಕ ʼಬಾಂಗ್ಲಾದೇಶ್ ಇಸ್ಲಾಮಿ ಛಾತ್ರ ಶಿಬಿರ್’ ಮೇಲೆ ಶೇಖ್ ಹಸೀನಾ ಸರಕಾರ ವಿಧಿಸಿದ್ದ ನಿಷೇಧವನ್ನು ಈಗಿನ ಮಧ್ಯಂತರ ಸರಕಾರ ತೆರವುಗೊಳಿಸಿದೆ.
ಜಮಾಅತೇ ಇಸ್ಲಾಮಿ ಮತ್ತು ಅದರ ಅಂಗಸಂಸ್ಥೆಗಳು ಭಯೋತ್ಪಾದಕ ಕೃತ್ಯ ಮತ್ತು ಹಿಂಸಾಚಾರದಲ್ಲಿ ಪಾಲ್ಗೊಂಡಿರುವುದಕ್ಕೆ ಯಾವುದೇ ಪುರಾವೆ ಲಭಿಸಿಲ್ಲ ಎಂದು ಸರಕಾರ ಹೇಳಿದೆ. ಪಕ್ಷ ಹಾಗೂ ಅದರ ಅಂಗಸಂಸ್ಥೆಗಳು ಯಾವುದೇ ರೀತಿಯ ಭಯೋತ್ಪಾದಕ ಚಟುವಟಿಕೆಗಳಲ್ಲಿ ಪಾಲ್ಗೊಂಡಿಲ್ಲ ಎಂದು ಮಧ್ಯಂತರ ಸರಕಾರ ನಂಬುತ್ತದೆ. ಆದ್ದರಿಂದ ನಿಷೇಧ ತೆರವುಗೊಳಿಸಲಾಗಿದೆ ಎಂದು ಸರಕಾರದ ಅಧಿಸೂಚನೆಯಲ್ಲಿ ಉಲ್ಲೇಖಿಸಲಾಗಿದೆ. ಜಮಾಅತೇ ಇಸ್ಲಾಮಿ ಪಕ್ಷ ಹಾಗೂ ಅದರ ಅಂಗಸಂಸ್ಥೆಗಳು ದೇಶದಾದ್ಯಂತ ಹಿಂಸಾತ್ಮಕ ಪ್ರತಿಭಟನೆಯಲ್ಲಿ ಭಾಗಿಯಾಗಿದೆ ಎಂದು ಕಾರಣ ನೀಡಿ ಶೇಖ್ ಹಸೀನಾ ಸರಕಾರ ಆಗಸ್ಟ್ 1ರಂದು ನಿಷೇಧಿಸಿತ್ತು.