ಢಾಕಾ: ಉದ್ಯೋಗ ಮೀಸಲಾತಿ ವಿರೋಧಿಸಿ ಬಾಂಗ್ಲಾದೇಶದಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿ ಸಾವು ನೋವುಗಳಿಗೆ ಕಾರಣವಾದ ಹಿನ್ನೆಲೆಯಲ್ಲಿ ದೇಶದಾದ್ಯಂತ ಇದ್ದ ಕರ್ಫ್ಯೂವನ್ನು ಸಡಿಲಿಸಲಾಗಿದೆ. ಬ್ಯಾಂಕ್‌ಗಳು, ಗಾರ್ಮೆಂಟ್ ಫ್ಯಾಕ್ಟರಿಗಳು ಕಾರ್ಯಾರಂಭ ಮಾಡಿವೆ.
ರಾಜಧಾನಿ ಢಾಕಾದಲ್ಲಿ ಸ್ಟಾಕ್ ಎಕ್ಸ್ಚೇಂಜ್‌ಗಳು, ಬ್ಯಾಂಕ್‌ಗಳು ಮತ್ತು ಕೆಲವು ಸರಕಾರಿ ಕಚೇರಿಗಳು ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ಕಾರ್ಯನಿರ್ವಹಿಸಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಬುಧವಾರ ರಾತ್ರಿಯೂ ದೇಶದಲ್ಲಿ ಬಹುತೇಕ ಶಾಂತ ವಾತಾವರಣ ಇತ್ತು ಎಂದು ಅವರು ಹೇಳಿದ್ದಾರೆ.
ಕಳೆದ ವಾರ ನಡೆದ ಹಿಂಸಾಚಾರದಲ್ಲಿ 186ಕ್ಕಿಂತಲೂ ಹೆಚ್ಚಿನ ಜನರು ಸಾವನ್ನಪ್ಪಿ, ನೂರಾರು ಜನರು ಗಾಯಗೊಂಡಿರುವುದಾಗಿ ವರದಿಯಾಗಿವೆ. ಸೂಕ್ಷ್ಮ ಪ್ರದೇಶಗಳಲ್ಲಿ ಸಾವಿರಾರು ಯೋಧರು ಗಸ್ತು ತಿರುಗುವುದನ್ನು ಮುಂದುವರೆಸಲಾಗಿದೆ. ಬುಧವಾರದಿಂದ ದೇಶದೆಲ್ಲೆಡೆ ಪರಿಸ್ಥಿತಿ ಶಾಂತವಾಗಿದ್ದು ಕಂಡುಬಂದಿದೆ. ಯಾವುದೇ ಹೊಸ ಹಿಂಸಾಚಾರದ ಘಟನೆ ವರದಿಯಾಗಿಲ್ಲ.