ಢಾಕಾ: ಸರ್ಕಾರಿ ನೇಮಕಾತಿಗಳಲ್ಲಿ ಮೀಸಲಾತಿ ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆ ತೀವ್ರ ಸ್ವರೂಪ ಪಡೆಯುತ್ತಿದೆ. ಗುರುವಾರ ದೇಶದ ವಿವಿಧೆಡೆ ಹಿಂಸಾಚಾರ ನಡೆದಿದ್ದು, 25 ಮಂದಿ ಮೃತಪಟ್ಟಿದ್ದಾರೆ. ಈ ಮೂಲಕ ಈ ಪ್ರತಿಭಟನೆಯಲ್ಲಿ ಮೃತಪಟ್ಟವರ ಸಂಖ್ಯೆ 32ಕ್ಕೆ ಏರಿಕೆಯಾಗಿದೆ.
ಗುರುವಾರ ಹಲವಾರು ಮಂದಿ ಗಾಯಗೊಂಡಿದ್ದು, ಆಸ್ಪತ್ರೆ ಸೇರಿದ್ದಾರೆ. ಗಡಿ ಭದ್ರತಾ ಪಡೆಗಳನ್ನು
ನಿಯೋಜಿಸಲಾಗಿದೆ.
ಪ್ರತಿಭಟನೆಗಳನ್ನು ನಿಯಂತ್ರಿಸಲು ಬಾಂಗ್ಲಾದೇಶದ ಹಲವೆಡೆ ಮೊಬೈಲ್ ಇಂಟರ್‌ನೆಟ್ ಸೇವೆಗಳನ್ನು ಕಡಿತಗೊಳಿಸಲಾಗಿತ್ತು. ಇದರಿಂದ ಆಕ್ರೋಶಗೊಂಡ ವಿದ್ಯಾರ್ಥಿಗಳು ಢಾಕಾದಲ್ಲಿ ಕೋಲು, ದೊಣ್ಣೆ ಮತ್ತು ಕಲ್ಲುಗಳೊಂದಿಗೆ ರಸ್ತೆಗಿಳಿದು ಹೆದ್ದಾರಿ ಗಳನ್ನು ತಡೆದರು. ಸರ್ಕಾರಿ ಕಟ್ಟಡಗಳನ್ನು
ಹಾನಿಗೊಳಿಸಿ, ಸಶಸ್ತ್ರ ಪೊಲೀಸರ ಜತೆ ಘರ್ಷಣೆಗಿಳಿದಿದ್ದಾರೆ.
ಪ್ರತಿಭಟನಕಾರರು ಬಾಂಗ್ಲಾದೇಶದ ಸರ್ಕಾರಿ ವಾಹಿನಿ ಬಿಟಿವಿಯ ಪ್ರಧಾನ ಕಚೇರಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.
ಇದರಿಂದ ಕಚೇರಿಯೊಳಗೆ ಹಲವರು ಸಿಕ್ಕಿಬಿದ್ದು, ತೊಂದರೆ ಅನುಭವಿಸಿದರು. ಏಕಾಏಕಿ ನೂರಾರು ಪ್ರತಿಭಟನಕಾರರು ಕಚೇರಿಯ ಆವರಣದೊಳಗೆ ನುಗ್ಗಿ ಕನಿಷ್ಠ 60ಕ್ಕೂ ಹೆಚ್ಚು ವಾಹನಗಳು ಮತ್ತು ಕಚೇರಿಯ ಕಟ್ಟಡಕ್ಕೆ ಬೆಂಕಿ ಹಚ್ಚಿದ್ದಾರೆ.
ಈ ಮಧ್ಯೆ ಪ್ರತಿಭಟನಾನಿರತ ವಿದ್ಯಾರ್ಥಿಗಳ ಜತೆಗೆ ಮಾತುಕತೆಗೆ ಸಿದ್ಧ ಎಂದು ಬಾಂಗ್ಲಾದೇಶದ ಸರ್ಕಾರ ತಿಳಿಸಿದೆ.