ಬೆಂಗಳೂರು: ಬೆಂಗಳೂರಿನಲ್ಲಿ ಟ್ರಾಫಿಕ್ ಸಮಸ್ಯೆ ಎನ್ನುವುದು ಇಂದು ನಿನ್ನೆಯದಲ್ಲ. ನಾಳೆಯೋ, ಮುಂದಿನ ವರ್ಷವೋ ಬಗೆಹರಿಯುವ ಲಕ್ಷಣವೂ ಇಲ್ಲ. ಎಲ್ಲಾ ವಾಹನ ಸವಾರರು ಅವಸರವಸರವಾಗಿಯೇ ವಾಹನ ಚಲಾಯಿಸುತ್ತಾರೆ. ಈ ನಡುವೆ ಬರು ಟ್ರಾಫಿಕ್ ಸಿಗ್ನಲ್’ಗಳು ಪೂರ್ತಿಯಾಗಿ ಹಸಿರು ಬಣ್ಣಕ್ಕೆ ತಿರುಗುವಷ್ಟು ಹೊತ್ತು ಕಾಯಲೂ ಬಹುತೇಕರಿಗೆ ಪುರುಸೊತ್ತು ಇರುವುದಿಲ್ಲ.
ಎಷ್ಟೇ ದಂಡ ವಿಧಿಸಿದರೂ ಟ್ರಾಫಿಕ್ ನಿಯಮಗಳ ಉಲ್ಲಂಘನೆಯಾಗುತ್ತಿರುವುದು ತಪ್ಪುತ್ತಿಲ್ಲ. ಇದಕ್ಕಾಗಿಯೇ ಬೆಂಗಳೂರು ಟ್ರಾಫಿಕ್ ಪೊಲೀಸರು ಅರಿವು ಮೂಡಿಸುವ ಪ್ರಯತ್ನ ಸೇರಿದಂತೆ ಹಲವು ರೀತಿಯ ಕಾರ್ಯಕ್ರಮಗಳನ್ನು ಆಯೋಜಿಸುತ್ತಲೇ ಇದೆ. ಇದೀಗ ಬೆಂಗಳೂರು ಟ್ರಾಫಿಕ್ ಪೊಲೀಸ್, ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಮಾಡಿರುವ ಪೋಸ್ಟ್ ಒಂದು ವೈರಲ್ ಆಗಿದೆ.
ಫುಟ್ಬಾಲ್ ವಿಶ್ವಕಪ್ ಅನ್ನು ಮರಳಿ ಪಡೆಯಲು ಅರ್ಜೆಂಟೀನಾ, ಸುದೀರ್ಘ 36 ವರ್ಷಗಳ ಕಾಲ ಕಾಯಬೇಕಾಯಿತು. ರಸ್ತೆ ಬಳಕೆದಾರರಾದ ನಾವು, ಟ್ರಾಫಿಕ್ ಸಿಗ್ನಲ್ ಜಂಕ್ಷನ್’ಗಳಲ್ಲಿ ಹಸಿರು ಸಿಗ್ನಲ್ ಪಡೆಯಲು ಕೆಲವು ಸೆಕೆಂಡುಗಳ ಕಾಲ ಕಾಯುವುದು ಸಾಧ್ಯವಿಲ್ಲವೇ ? ಎಂದು ಟ್ವಟರ್ ಮತ್ತು ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಿದೆ. ಮೇಲ್ಭಾಗದಲ್ಲಿ ಮೆಸ್ಸಿ ವಿಶ್ವಕಪ್ ಟ್ರೋಫಿಗೆ ಚುಂಬಿಸುತ್ತಿರುವ ಫೋಟೋ ಮತ್ತು ಕೆಳಭಾಗದಲ್ಲಿ ಟ್ರಾಫಿಕ್ ಸಿಗ್ನಲ್’ನಲ್ಲಿ ವಾಹನ ಸವಾರರು ಕಾಯುತ್ತಿರುವ ಫೋಟೋವನ್ನು ಪೋಸ್ಟ್ ಮಾಡಲಾಗಿದೆ.