ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಪ್ರತಿಷ್ಟಿತ ‘ಮಂತ್ರಿ ಸ್ಕ್ವೇರ್’ ಮಾಲ್ ಗೆ ಬಿಬಿಎಂಪಿ ಅಧಿಕಾರಿಗಳು ಬೀಗ ಹಾಕಿದ್ದಾರೆ. ಮಾಲ್ ಅಧಿಕೃತರು ಬಿಬಿಎಂಪಿಗೆ ತೆರಿಗೆ ಕಟ್ಟದೆ ವಂಚಿಸಿರುವುದೇ ಮಾಲ್ ಗೆ ಬೀಗ ಹಾಕಲು ಕಾರಣ ಎನ್ನಲಾಗಿದೆ. ಸುಮಾರು 27 ಕೋಟಿ ತೆರಿಗೆ ಮತ್ತು 12 ಕೋಟಿ ರೂಪಾಯಿಗಳಷ್ಟು ಬಡ್ಡಿ ಹೀಗೆ ಒಟ್ಟು 39 ಕೋಟಿ ರೂಪಾಯಿಗಳಷ್ಟು ತೆರಿಗೆ ಬಾಕಿ ಇಟ್ಟಿದ್ದಾರೆ ಎಂದು ಬಿಬಿಎಂಪಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ತೆರಿಗೆ ಬಾಕಿ ಕುರಿತು ಹಲವು ಬಾರಿ ಎಚ್ಚರಿಕೆ ನೀಡಲಾಗಿದ್ದರೂ ಮಾಲ್ ಆಡಳಿತ ಬಿಬಿಎಂಪಿಗೆ ಚೆಕ್ ಗಳನ್ನು ನೀಡಿತ್ತು. ಆದರೆ ಆ ಎಲ್ಲಾ ಚೆಕ್ ಗಳು ಬೌನ್ಸ್ ಆಗಿದೆ ಎನ್ನಲಾಗಿದೆ. ಇಂದು ಬಿಬಿಎಂಪಿ ಆಯುಕ್ತ ಶಿವಸ್ವಾಮಿ ಮತ್ತು ತಂಡ ಮಲ್ಲೇಶ್ವರಂನ ಮಾಲ್ ಗೆ ಭೇಟಿ ನೀಡಿ ಮಾಲ್ ಗೆ ಬೀಗ ಹಾಕಿದೆ.