ಪ್ರಯಾಣ ನಿರಾಕರಣೆ : ಬಾಲಕನಿಗೆ 4.75 ಲಕ್ಷ ರೂ. ನೀಡಲು ಲುಫ್ತಾನ್ಸಾ ಏರ್‌ಲೈನ್ಸ್​​ಗೆ ಬೆಂಗಳೂರು ಗ್ರಾಹಕರ ನ್ಯಾಯಾಲಯ ಆದೇಶ

Prasthutha|

ಬೆಂಗಳೂರು: ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 2021 ರಲ್ಲಿ ಕೋವಿಡ್-19 ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಮಹಿಳೆಯೊಬ್ಬರು ಮತ್ತು ಅವರ ಪುತ್ರನಿಗೆ ವಿಮಾನ ಹತ್ತಲು ನಿರಾಕರಿಸಿದ ಜರ್ಮನ್ ಏರ್‌ಲೈನ್ಸ್ ಲುಫ್ತಾನ್ಸಾಗೆ ಬೆಂಗಳೂರಿನ ಗ್ರಾಹಕ ನ್ಯಾಯಾಲಯ 4.75 ಲಕ್ಷ ರೂಪಾಯಿ ಪಾವತಿಸುವಂತೆ ಆದೇಶಿಸಿದೆ.

- Advertisement -

ಗ್ರೀಕ್​​​​ನಿಂದ ಬಂದ ಕಿರಿಯಾಕಿ ಪೆಟ್ರಿಟಿ ಮತ್ತು ಅವರ ಮಗ ಕೋವಿಡ್ ತುರ್ತು ಪರಿಸ್ಥಿತಿಯ ಸಮಯದಲ್ಲಿ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದಿದ್ದರು. ಗ್ರೀಕ್ ಹುಡುಗನ ಪಾಸ್ಪೋರ್ಟ್ ಅವಧಿ ಮುಗಿದಿತ್ತು. ಬಾಲಕನ ತಂದೆ ಅಶೋಕ್ ಪ್ರಭು ಅವರು ಹೊಸದಿಲ್ಲಿಯಲ್ಲಿರುವ ಗ್ರೀಕ್ ರಾಯಭಾರ ಕಚೇರಿಯಿಂದ ಬಾಲಕನಿಗೆ ತುರ್ತು ಪಾಸ್‌ಪೋರ್ಟ್ ನೀಡಿದ್ದರು ಎಂದು 2021 ರ ಅಕ್ಟೋಬರ್​​ನಲ್ಲಿ ‘ಟೈಮ್ಸ್ ಆಫ್ ಇಂಡಿಯಾ’ ವರದಿ ಉಲ್ಲೇಖಿಸಿತ್ತು.

ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಲುಫ್ತಾನ್ಸಾ ಏರ್‌ಲೈನ್ಸ್‌ನ ಗ್ರೌಂಡ್ ಸ್ಟಾಫ್, ತುರ್ತು ಪಾಸ್‌ಪೋರ್ಟ್ ಬಳಸಿ ಜರ್ಮನಿಗೆ ಪ್ರಯಾಣಿಸಲು ಸಾಧ್ಯವಿಲ್ಲ ಎಂದು ಗ್ರೀಕ್ ಹುಡುಗನನ್ನು ವಿಮಾನ ಹತ್ತಲು ಬಿಟ್ಟಿರಲಿಲ್ಲ.

- Advertisement -

ಹುಡುಗನ ತಾಯಿ ಪೆಟ್ರಿಟಿ ನಂತರ ಎಮಿರೇಟ್ಸ್ ಏರ್‌ಲೈನ್ಸ್‌ನಲ್ಲಿ 4.49 ಲಕ್ಷ ರೂಪಾಯಿ ಖರ್ಚು ಮಾಡಿ ಟಿಕೆಟ್‌ಗಳನ್ನು ಬುಕ್ ಮಾಡಿ ದುಬೈ ಮೂಲಕ ಗ್ರೀಕ್​​ಗೆ ತಲುಪಿದರು. ಗ್ರೀಕ್​​ಗೆ ತಲುಪಿದ ನಂತರ ಪೆಟ್ರಿಟಿ ಜರ್ಮನ್ ಫೆಡರಲ್ ಪೋಲಿಸ್‌ಗೆ ಹುಡುಗನ ತುರ್ತು ಪಾಸ್‌ಪೋರ್ಟ್‌ನ ಸಿಂಧುತ್ವದ ಬಗ್ಗೆ ವಿಚಾರಿಸುತ್ತಾ ಪತ್ರ ಬರೆದರು. ಇದಕ್ಕೆ ಪ್ರತಿಕ್ರಿಯಿಸಿದ ಪೊಲೀಸರು ತುರ್ತು ಪಾಸ್‌ಪೋರ್ಟ್ ಜರ್ಮನಿಯ ಮೂಲಕ ಪ್ರಯಾಣಿಸಲು ಮಾನ್ಯವಾಗಿದೆ ಎಂದು ಹೇಳಿದ್ದರು.

ವಿಮಾನವನ್ನು ಹತ್ತಲು ನಿರಾಕರಿಸಿದ್ದಕ್ಕಾಗಿ ಮರುಪಾವತಿ ಮಾಡುವಂತೆ ಮಹಿಳೆಯು ಕೇಳಿದಾಗ ಲುಫ್ತಾನ್ಸಾ ಏರ್‌ಲೈನ್ಸ್‌ನ ಕಸ್ಟಮರ್ ಕೇರ್ ವಿಭಾಗವು ಧನಾತ್ಮಕವಾಗಿ ಸ್ಪಂದಿಸಿರಲಿಲ್ಲ ಎಂದು ವರದಿಯಾಗಿದೆ.

ಪೆಟ್ರಿಟಿ ಮತ್ತು ಅಶೋಕ್ ಪ್ರಭು ಅವರು 2022 ರ ಮಾರ್ಚ್​​ನಲ್ಲಿ ಬೆಂಗಳೂರಿನ ಶಾಂತಿನಗರದ ಗ್ರಾಹಕ ನ್ಯಾಯಾಲಯವನ್ನು ಸಂಪರ್ಕಿಸಿದ್ದರು. 2023ರ ಜುಲೈ 11 ರಂದು ನ್ಯಾಯಾಲಯವು ಲುಫ್ತಾನ್ಸಾ ಏರ್‌ಲೈನ್ಸ್‌ಗೆ ಗ್ರೀಕ್ ಹುಡುಗ ಮತ್ತು ಆಕೆಯ ತಾಯಿಯ ಟಿಕೆಟ್‌ಗಳ ಮರುಪಾವತಿ ಹಣವನ್ನು ಪಾವತಿಸುವಂತೆ ಆದೇಶಿಸಿತು. ಇಷ್ಟೇ ಅಲ್ಲದೆ, ಕೋವಿಡ್ ತುರ್ತು ಪರಿಸ್ಥಿತಿಯ ಸಮಯದಲ್ಲಿ ಹುಡುಗನಿಗೆ ತೊಂದರೆ ನೀಡಿದ್ದಕ್ಕಾಗಿ ನ್ಯಾಯಾಲಯವು 25,000 ರೂ. ದಂಡವನ್ನೂ ವಿಮಾನಯಾನ ಸಂಸ್ಥೆಗೆ ವಿಧಿಸಿದೆ.

Join Whatsapp