ಬೆಂಗಳೂರು: ನಾಮನಿರ್ದೇಶಿತ ಸದಸ್ಯರ ಮತದಾನದ ಹಕ್ಕು ತಿರಸ್ಕರಿಸಲು ಕಾಂಗ್ರೆಸ್ ನಿಂದ ಆಯೋಗಕ್ಕೆ ಮನವಿ

Prasthutha|

ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ತಿಗೆ ನಡೆಯುತ್ತಿರುವ ಚುನಾವಣೆಗೆ ರಾಜ್ಯದ ಎಲ್ಲ ಸ್ಥಳೀಯ ಸಂಸ್ಥೆಗಳ ನಾಮನಿರ್ದೇಶಿತ ಸದಸ್ಯರ ಮತದಾನದ ಹಕ್ಕು ತಿರಸ್ಕರಿಸಬೇಕು ಎಂದು ರಾಜ್ಯ ಚುನಾವಣೆ ಆಯೋಗದ ಮೂಲಕ ಕೇಂದ್ರ ಚುನಾವಣೆ ಆಯೋಗಕ್ಕೆ ಪತ್ರ ಬರೆದು ಮನವಿ ಮಾಡಲಾಗುವುದು.

- Advertisement -

ಬೆಂಗಳೂರು ನಗರ ಸ್ಥಳೀಯ ಸಂಸ್ಥೆಗಳ ನಾಮನಿರ್ದೇಶನ ಸದಸ್ಯರಿಗೆ ಮತದಾನದ ಹಕ್ಕು ನೀಡಬಾರದು. ಸಂವಿಧಾನದ 243 (ಆರ್) ನೇ ಪರಿಚ್ಛೇದದ ಅನ್ವಯ ನಾಮನಿರ್ದೇಶಿತ ಸದಸ್ಯರು ಕಲಾಪದಲ್ಲಿ ಪಾಲ್ಗೊಂಡು, ಸಲಹೆಗಳನ್ನು ನೀಡಬಹುದೇ ಹೊರತು ಮತದಾನ ಮಾಡಲು ಅವಕಾಶವಿಲ್ಲ ಎಂಬ ನಿಯಮವಿದೆ. ಈ ಬಗ್ಗೆ ನಮ್ಮ ಪಕ್ಷದವರೇ ಆದ ಮಾಜಿ ಮೇಯರ್ ಪಿ.ಆರ್. ರಮೇಶ್ ಅವರು ನ್ಯಾಯಾಲಯದ ಮೊರೆ ಹೋಗಿದ್ದರು.

ಇಂದು ಮಧ್ಯಾಹ್ನ ಮಧ್ಯಂತರ ಆದೇಶ ಹೊರಡಿಸಿರುವ ನ್ಯಾಯಾಲಯವು, ನಾಮನಿರ್ದೇಶನ ಸದಸ್ಯರ ಮತಗಳನ್ನು ಮುಚ್ಚಿದ ಲಕೋಟೆಯಲ್ಲಿ, ಪ್ರತ್ಯೇಕ ಮತಪೆಟ್ಟಿಗೆಯಲ್ಲಿ ಇಡಬೇಕು. ತಾನು ಮುಂದಿನ ಆದೇಶ ನೀಡುವವರೆಗೂ ಅವುಗಳನ್ನು ತೆರೆಯಬಾರದು, ಮತಗಳ ಎಣಿಕೆಗೂ ಪರಿಗಣಿಸಬಾರದು ಎಂದು ಸೂಚಿಸಿ, ಸರಕಾರ ಮತ್ತು ಚುನಾವಣೆ ಆಯೋಗಕ್ಕೂ ನೋಟೀಸ್ ಜಾರಿ ಮಾಡಿದೆ.

- Advertisement -

ನ್ಯಾಯಾಲಯದ ಈ ಆದೇಶವನ್ನು ರಾಜ್ಯದ ಎಲ್ಲ 219 ಸ್ಥಳೀಯ ಸಂಸ್ಥೆಗಳಿಗೂ ಅನ್ವಯ ಮಾಡಬೇಕು. ಇಲ್ಲಿ ತಲಾ ಐವರು ನಾಮನಿರ್ದೇಶಿತ ಸದಸ್ಯರು ಇದ್ದಾರೆ. ಅವರೆಲ್ಲರ ಮತದಾನದ ಹಕ್ಕು ರದ್ದಪಡಿಸಬೇಕು ಎಂದು ರಾಜ್ಯ ಸರಕಾರವನ್ನು ಆಗ್ರಹಿಸುತ್ತಿದ್ದೇವೆ. ಕೇಂದ್ರ ಚುನಾವಣೆ ಆಯೋಗಕ್ಕೂ ಕಾಂಗ್ರೆಸ್ ಪಕ್ಷದಿಂದ ಮನವಿ ಮಾಡುತ್ತಿದ್ದೇವೆ.

ಈಗ ನ್ಯಾಯಾಲಯ ಮಧ್ಯಂತರ ಆದೇಶವನ್ನಷ್ಟೇ ನೀಡಿದೆ. ನಾಳೆ ನಾಮನಿರ್ದೇಶಿತ ಸದಸ್ಯರ ಮತಗಳನ್ನು ಪುರಸ್ಕರಿಸಬಹುದು ಇಲ್ಲವೇ ತಿರಸ್ಕರಿಸಬಹುದು. ಹೀಗಾಗಿ ಮತದಾನದ ಹಕ್ಕು ರದ್ದುಪಡಿಸುವಂತೆ ಕೇಳುವುದು ಎಷ್ಟು ಸರಿ ಎಂಬ ಪ್ರಶ್ನೆಗೆ ಉತ್ತರಿಸಿದ ಶಿವಕುಮಾರ್ ಅವರು, ಕೋರ್ಟ್ ನಮ್ಮ ಮನವಿಯನ್ನು ಪರಿಗಣಿಸುತ್ತದೆ ಎಂಬ ವಿಶ್ವಾಸವಿದೆ. ಅಂತಿಮವಾಗಿ ಕೋರ್ಟ್ ಆದೇಶಕ್ಕೆ ನಾವು ಬದ್ಧ ಎಂದರು.

ಹಿಂದೆ ನಮ್ಮ ಅವಧಿಯಲ್ಲೂ ಮತದಾನ ಆಗಿರಬಹುದು. ಆದರೆ ಸಂವಿಧಾನದ ಆಶಯ ಎಲ್ಲೋ ಒಂದು ಕಡೆ ನ್ಯಾಯಾಲಯದಲ್ಲಿ ಇತ್ಯರ್ಥ ಆಗಲೇಬೇಕಲ್ಲವೇ? ನಮಗೆ ಮನದಟ್ಟಾದ ವಿಷಯವನ್ನು ಕೋರ್ಟ್ ಗಮನಕ್ಕೆ ತಂದಿದ್ದೇವೆ. ನಮ್ಮ ವಕೀಲರು ನ್ಯಾಯಾಲಯಕ್ಕೂ ಮನವರಿಕೆ ಮಾಡಿಕೊಟ್ಟಿದ್ದಾರೆ.

ವಿಜಯಪುರದಲ್ಲಿ ಪಿಡಿಒಗಳನ್ನು ಬಿಜೆಪಿ ಚುನಾವಣೆ ಕೆಲಸಕ್ಕೆ ದುರ್ಬಳಕೆ ಮಾಡಿಕೊಂಡಿರುವ ಬಗ್ಗೆ ದೂರುಗಳ ಬಗ್ಗೆ ಪ್ರತಿಕ್ರಿಯೆ ವ್ಯಕ್ತಪಡಿಸಿದ ಅವರು, ಇಡೀ ಸರಕಾರದ ಆಡಳಿತ ಯಂತ್ರವೇ ದುರುಪಯೋಗ ಆಗುತ್ತಿದೆ ಎಂದರು.

ಎಲ್ಲ ಧರ್ಮದವರನ್ನೂ ಗೌರವದಿಂದ ಕಾಣಬೇಕು

ಬೆಳಗಾವಿ ಅಧಿವೇಶನದಲ್ಲಿ ಮತಾಂತರ ನಿಷೇಧ ತಿದ್ದುಪಡಿ ವಿಧೇಯಕ ಮಂಡನೆಗೆ ಸರಕಾರ ಗಂಭೀರ ಚಿಂತನೆ ನಡೆಸಿರುವ ಬಗ್ಗೆ ಗಮನ ಸೆಳೆದಾಗ ಉತ್ತರಿಸಿದ ಶಿವಕುಮಾರ್ ಅವರು, ಈಗಾಗಲೇ ಅಸ್ತಿತ್ವದಲ್ಲಿರುವ ಕಾಯಿದೆಗೆ ದುರುದ್ದೇಶಪೂರಿತ ಹೆಚ್ಚುವರಿ ತಿದ್ದುಪಡಿ ತರಲು ಕಾಂಗ್ರೆಸ್ ಪಕ್ಷದ ಸಂಪೂರ್ಣ ವಿರೋಧವಿದೆ. ನಿರ್ದಿಷ್ಟ ಸಮುದಾಯವನ್ನು ಗುರಿಯಾಗಿಟ್ಟುಕೊಂಡು ಸರಕಾರ ದ್ವೇಷದ ರಾಜಕೀಯ ಮಾಡುತ್ತಿದೆ. ನಮ್ಮ ಸಂವಿಧಾನದಲ್ಲಿ ಎಲ್ಲ ಧರ್ಮಗಳಿಗೂ, ಸಮುದಾಯಗಳಿಗೂ ಸಮಾನ ಗೌರವವಿದೆ. ಧಾರವಾಡ, ಕೊಡಗು ಮತ್ತಿತರ ಕಡೆ ಈಗಾಗಲೇ ಏನೇನಾಯ್ತು ಎಂಬುದು ಎಲ್ಲರಿಗೂ ಗೊತ್ತಿದೆ. ನಮ್ಮದು ಜಾತ್ಯತೀತ ದೇಶ, ರಾಜ್ಯ. ಇಡೀ ವಿಶ್ವ ನಮ್ಮನ್ನು ಗಮನಿಸುತ್ತಿದೆ. ಚರ್ಚ್ ಮೇಲಿನ ದಾಳಿ, ಅನ್ಯ ಧರ್ಮೀಯರ ಭಾವನೆಗಳಿಗೆ ಧಕ್ಕೆ ಸರಿಯಲ್ಲ. ಬಿಜೆಪಿ ಸರಕಾರ ದುಸ್ಸಾಹಸಕ್ಕೆ ಕೈ ಹಾಕಬಾರದು ಎಂದರು. ಇದರಿಂದ ರಾಜ್ಯದ ಗೌರವಕ್ಕೆ ಕುಂದು ಬರುವುದಲ್ಲದೆ, ಕಾನೂನು ಮತ್ತು ಸುವ್ಯವಸ್ಥೆಗೂ ಭಂಗವಾಗಲಿದೆ ಎಂದರು.

ಕ್ರೈಸ್ತ ಸಮುದಾಯ ಶಿಕ್ಷಣ, ಆರೋಗ್ಯ ಮತ್ತಿತರ ಸಮಾಜ ಸೇವೆಗಳ ಮೂಲಕ ಗಮನ ಸೆಳೆದಿದೆ.‌ ಗೌರವದಿಂದ ಸೇವೆ ಮಾಡುತ್ತಾ ಬಂದಿದೆ. ಅವರ ಮನಸ್ಸಿಗೆ ನೋವುಂಟು ಮಾಡುವುದು ಸರಿಯಲ್ಲ.

ಬಿಪಿನ್ ರಾವತ್ ಅವರ ನಿಧನಕ್ಕೆ ಸಂತಾಪ

ಭಾರತೀಯ ಮೂರೂ ಸೇನಾಪಡೆಗಳ ಮುಖ್ಯಸ್ಥರಾಗಿದ್ದ ಬಿಪಿನ್ ರಾವತ್ ಹಾಗೂ ಅವರ ಸಹೋದ್ಯೋಗಿಗಳ ದುರಂತ ಸಾವಿಗೆ ಕಾಂಗ್ರೆಸ್ ಪಕ್ಷ ತೀವ್ರ ಸಂತಾಪ ಸೂಚಿಸುತ್ತದೆ. ಅವರ ಸಾವು ದಿಗ್ಭ್ರಮೆ ಮೂಡಿಸಿದೆ. ಇಡೀ ದೇಶದ ನಾಗರಿಕರು, ಯೋಧರ ದುಃಖದಲ್ಲಿ ನಾವು ಭಾಗಿಯಾಗಿದ್ದೇವೆ.

ಇಂದು ನಮ್ಮ ಪಕ್ಷದ ನಾಯಕಿ ಶ್ರೀಮತಿ ಸೋನಿಯಾ ಗಾಂಧಿ ಅವರ ಜನ್ಮದಿನ. ಬಡವರಿಗೆ ನೆರವು ನೀಡುವ ಕಾರ್ಯಕ್ರಮ ಹಮ್ಮಿಕೊಂಡಿದ್ದೆವು. ಆದರೆ ಬಿಪಿನ್ ರಾವತ್ ಅವರ ನಿಧನದ ಗೌರವಾರ್ಥ, ನಮ್ಮ ನಾಯಕಿ ಅವರ ಸೂಚನೆ ಮೇರೆಗೆ ಜನ್ಮದಿನ ಆಚರಣೆಯನ್ನು ರದ್ದುಪಡಿಸಲಾಯ್ತು.

Join Whatsapp