ಬೆಂಗಳೂರು ಉತ್ತರ: ಗೆಲ್ಲುವವರು ಯಾರೆಂಬ ಪ್ರಶ್ನೆ!

Prasthutha|

ಬೆಂಗಳೂರು: ಸದಾನಂದ ಗೌಡ ಪ್ರತಿನಿಧಿಸುತ್ತಿರುವ ಬೆಂಗಳೂರು ಉತ್ತರದಲ್ಲಿ ಬಿಜೆಪಿಯಿಂದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮತ್ತು ಕಾಂಗ್ರೆಸ್​​ನಿಂದ ಐಐಎಂಬಿಯ ಸಾರ್ವಜನಿಕ ನೀತಿ ಕೇಂದ್ರದ ಅಧ್ಯಕ್ಷರೂ ಆಗಿರುವ ಕಾಂಗ್ರೆಸ್ ಸಂಶೋಧನಾ ವಿಭಾಗದ ಅಧ್ಯಕ್ಷ ಎಂವಿ ರಾಜೀವ್ ಗೌಡ ಕಣದಲ್ಲಿದ್ದಾರೆ. 2019ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್​​ನ ಕೃಷ್ಣ ಬೈರೇಗೌಡರನ್ನು 1,47,518 ಮತಗಳ ಅಂತರದಿಂದ ಸೋಲಿಸಿದ್ದ ಡಿವಿ ಸದಾನಂದಗೌಡ ಸ್ಥಾನದಲ್ಲಿ ಶೋಭಾ ಸ್ಪರ್ಧಿಸುತ್ತಿದ್ದಾರೆ.

- Advertisement -

ರಾಜ್ಯದ ಅತಿದೊಡ್ಡ ಲೋಕಸಭಾ ಕ್ಷೇತ್ರ ಇದಾಗಿದ್ದು, ಸುಮಾರು 32,14,496 ಮತದಾರರನ್ನು ಹೊಂದಿದೆ. ಈ ಬಾರಿ ಬಿಜೆಪಿ ಮತ್ತು ಕಾಂಗ್ರೆಸ್ ಮಧ್ಯೆ ಜಿದ್ದಾಜಿದ್ದಿಯ ಪೈಪೋಟಿ ನಡೆಯುವ ಎಲ್ಲ ಲಕ್ಷಗಳು ಕಾಣಿಸಿವೆ.

ಬೆಂಗಳೂರು ಉತ್ತರದಲ್ಲಿ ಮೊದಲ ಚುನಾವಣೆ 1951 ರಲ್ಲಿ ನಡೆದು ಕೇಶವ ಮೂರ್ತಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸಂಸದರಾಗಿ ಆಯ್ಕೆಯಾಗಿದ್ದರು. ಈ ಕ್ಷೇತ್ರದಿಂದ ಕಾಂಗ್ರೆಸ್ 12 ಬಾರಿ, ಬಿಜೆಪಿ ನಾಲ್ಕು ಬಾರಿ ಮತ್ತು 1996 ರಲ್ಲಿ ಜೆಡಿಎಸ್ ಒಂದು ಬಾರಿ ಗೆದ್ದಿದೆ.

- Advertisement -

ಹೆಬ್ಬಾಳ, ಬ್ಯಾಟರಾಯನಪುರ ಮತ್ತು ಯಶವಂತಪುರದಲ್ಲಿ ನೀರಿನ ಸಮಸ್ಯೆಯೇ ಸದ್ಯ ಪ್ರಮುಖ ಚರ್ಚೆಯ ವಿಷಯವಾಗಿದೆ. 2023 ರಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಹೆಬ್ಬಾಳ (ಬೈರತಿ ಸುರೇಶ್), ಪುಲಕೇಶಿನಗರ (ಎಸಿ ಶ್ರೀನಿವಾಸ) ಮತ್ತು ಬ್ಯಾಟರಾಯನಪುರ (ಕೃಷ್ಣ ಬೈರೇಗೌಡ) ಕ್ಷೇತ್ರಗಳಲ್ಲಿ ಕಾಂಗ್ರೆಸ್ ನಾಯಕರು ಆಯ್ಕೆಯಾದ ಕ್ಷೇತ್ರಗಳಲ್ಲಿ ಈ ಬಾರಿ ಬಿಜೆಪಿಗೆ ಕಠಿಣ ಸವಾಲು ಎದುರಾಗಲಿದೆ.ಸದಾನಂದ ಗೌಡರ ಮೇಲಿನ ಸಿಂಪತಿಯೂ ಬಿಜೆಪಿಗೆ ಒಂದಷ್ಟು ಮತವನ್ನು ಕಡಿಮೆ ಮಾಡುವ ಸಾಧ್ಯತೆ ಇದೆ.

ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಮಾಡಿಕೊಂಡಿರುವುದರಿಂದ ದಾಸರಹಳ್ಳಿಯಲ್ಲಿ ಮಾಜಿ ಶಾಸಕ ಮಂಜುನಾಥ್ ಕಾಂಗ್ರೆಸ್ ಸೇರಿದ್ದಾರೆ. ಇದರಿಂದ ಜೆಡಿಎಸ್ ಮತಗಳನ್ನು ಗಳಿಸಬಹುದು ಎಂಬ ವಿಶ್ವಾಸದಲ್ಲಿ ಕಾಂಗ್ರೆಸ್ ನಾಯಕರಿದ್ದಾರೆ. ಆದರೆ, ಎಸ್ ಮುನಿರಾಜು ಬೆಂಬಲ ಇರುವ ಕಾರಣ ಬಿಜೆಪಿ ಸಹ ವಿಶ್ವಾಸದಿಂದ ಇದೆ.

ಬೆಂಗಳೂರಿನ ಪ್ರಮುಖ ಕ್ಷೇತ್ರಗಳಾದ ಮಲ್ಲೇಶ್ವರಂ ಮತ್ತು ಮಹಾಲಕ್ಷ್ಮಿ ಲೇಔಟ್‌ ಬಿಜೆಪಿ ಶಕ್ತಿಯಾಗಿದೆ. 2019 ರ ಲೋಕಸಭಾ ಚುನಾವಣೆಯಲ್ಲಿ ಈ ಭಾಗದ 28,49,250 ಮತದಾರರಲ್ಲಿ ಕೇವಲ 15,60,324 ಜನರು ಮತ ಚಲಾಯಿಸಿದ್ದರು. ಅಂದರೆ ಶೇಕಡಾವಾರು ಮತದಾನ ಪ್ರಮಾಣ 54.76. ಈ ಬಾರಿ ಎರಡೂ ಪಕ್ಷಗಳು ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡುವಂತೆ ಜನರ ಮನವೊಲಿಸಲು ಮುಂದಾಗಿವೆ. ಕ್ಷೇತ್ರದಲ್ಲಿ ಅಪಾರ್ಟ್‌ಮೆಂಟ್‌ಗಳ ಮತದಾರರನ್ನು ಸೆಳೆಯಲು ಕಾಂಗ್ರೆಸ್ ಮುಂದಾಗಿದ್ದು, ಬಿಜೆಪಿ ಮೋದಿ ಅಂಶವನ್ನು ನೆಚ್ಚಿಕೊಂಡು ಪ್ರಚಾರ ನಡೆಸುತ್ತಿದೆ.

Join Whatsapp