ರೈತ ಹೋರಾಟ ತೀವ್ರಗೊಳಿಸಲು ದೀದಿ ಬೆಂಬಲ : ಟಿಕಾಯತ್‌, ಮಮತಾ ಬ್ಯಾನರ್ಜಿ ಮಹತ್ವದ ಮಾತುಕತೆ

Prasthutha|

ಕೊಲ್ಕತಾ : ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಭೇಟಿಯಾದ ಭಾರತೀಯ ಕಿಸಾನ್‌ ಒಕ್ಕೂಟದ ಮುಖಂಡ ರಾಕೇಶ್‌ ಟಿಕಾಯತ್‌, ಕಳೆದ ಆರು ತಿಂಗಳಿನಿಂದ ನಡೆಯುತ್ತಿರುವ ರೈತ ಹೋರಾಟದ ಬಗ್ಗೆ ಮಾತುಕತೆ ನಡೆಸಿದ್ದಾರೆ.

- Advertisement -

ಕೇಂದ್ರ ಸರಕಾರದ ವಿವಾದಿತ ಕೃಷಿ ಕಾಯ್ದೆಗಳನ್ನು ಹಿಂಪಡೆಯುವಂತೆ ಒತ್ತಾಯಿಸಿ ರೈತರು ನಡೆಸುತ್ತಿರುವ ಪ್ರತಿಭಟನೆಯನ್ನು ಇನ್ನಷ್ಟು ತೀವ್ರಗೊಳಿಸಲು ತಂತ್ರಗಾರಿಕೆಯನ್ನು ಹೆಣೆಯುವ ಬಗ್ಗೆ ಮಮತಾ ಬ್ಯಾನರ್ಜಿ ಜೊತೆ ಟಿಕಾಯತ್‌ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.

ಕೈಗಾರಿಕೆಗಳು ತೊಂದರೆ ಅನುಭವಿಸುತ್ತಿವೆ. ಔಷಧಿಗಳ ಮೇಲೆಯೂ ಜಿಎಸ್‌ ಟಿ ವಿಧಿಸಲಾಗುತ್ತಿದೆ. ಎಲ್ಲಾ ಮೂರು ಕೃಷಿ ಕಾನೂನುಗಳನ್ನು ಹಿಂಪಡೆಯಬೇಕೆಂದು ನಾನು ಒತ್ತಾಯಿಸುತ್ತೇನೆ ಎಂದು ಮಾತುಕತೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಟಿಕಾಯತ್‌ ಹೇಳಿದ್ದಾರೆ.

- Advertisement -

ರೈತರ ಹೋರಾಟಕ್ಕೆ ತಮ್ಮ ಬೆಂಬಲ ಮುಂದುವರಿಸುತ್ತೇನೆ ಎಂದು ಸಿಎಂ ಹೇಳಿದ್ದಾರೆ. ಈ ಬೆಂಬಲಕ್ಕೆ ಅವರಿಗೆ ನಾವು ಆಭಾರಿಗಳಾಗಿದ್ದೇವೆ ಎಂದು ಟಿಕಾಯತ್‌ ಹೇಳಿದ್ದಾರೆ.

ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗೂ ಮುನ್ನಾ ರಾಜ್ಯಕ್ಕೆ ಭೇಟಿ ನೀಡಿದ್ದ ಟಿಕಾಯತ್‌, ಟಿಎಂಸಿಗೆ ಮತ ನೀಡುವಂತೆ ರೈತರನ್ನು ಕೋರಿದ್ದರು. ಇದೀಗ ಬಹುಮತದ ಸರಕಾರ ನಡೆಸುತ್ತಿರುವ ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರನ್ನು ಟಿಕಾಯತ್‌ ಭೇಟಿಯಾಗಿ ಮಹತ್ವದ ಮಾತುಕತೆ ನಡೆಸಿದ್ದಾರೆ.



Join Whatsapp