ಬೆಂಗಳೂರು: ಮಾಗಡಿ ತಾಲೂಕಿನ ಬಂಡೇ ಮಠದ ಬಸವಲಿಂಗ ಶ್ರೀಗಳ ಆತ್ಮಹತ್ಯೆ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದ್ದು, ಶ್ರೀಗಳ ಆತ್ಮಹತ್ಯೆ ಹಿಂದೆ ಸ್ಥಳೀಯ ಸ್ವಾಮೀಜಿಯ ಕೈವಾಡವಿರುವ ಶಂಕೆ ವ್ಯಕ್ತವಾಗಿದೆ.
ಪ್ರಕರಣದ ಸಂಬಂಧಿಸಿದಂತೆ ಡೆತ್ ನೋಟ್, ಮೊಬೈಲ್ ಇನ್ನಿತರ ಸಾಕ್ಷಾಧಾರಗಳನ್ನು ಎಫ್ ಎಸ್ ಎಲ್ ನ ಪರಿಶೀಲನೆಗೆ ಕಳುಹಿಸಿ ಮಠಕ್ಕೆ ಹಾಗೂ ಶ್ರೀಗಳಿಗೆ ಅಪ್ತರಾದ 20ಕ್ಕೂ ಹೆಚ್ಚು ಮಂದಿಯ ವಿಚಾರಣೆ ನಡೆಸಲಾಗಿದೆ.
ಶ್ರೀಗಳ ಆತ್ಮಹತ್ಯೆಯ ಹಿಂದೆ ಸ್ಥಳೀಯ ಸ್ವಾಮೀಜಿಯ ಕೈವಾಡವಿರುವ ಅನುಮಾನದ ಬಗ್ಗೆಯೂ ಪರಿಶೀಲನೆ ನಡೆಸಲಾಗಿದೆ ಎಂದು ರಾಮನಗರ ಎಸ್ ಪಿ ಸಂತೋಷ್ ಬಾಬು ತಿಳಿಸಿದ್ದಾರೆ.
ಸ್ಥಳೀಯ ಸ್ವಾಮೀಜಿ ಹಾಗೂ ಇತರ ಏಳೆಂಟು ಮಂದಿಯಿಂದ ಬಸವಲಿಂಗ ಶ್ರೀಗಳಿಗೆ ಮಠದ ವಿಚಾರದಲ್ಲಿ ಆಗಾಗ ತೊಂದರೆ ಉಂಟು ಮಾಡಿರುವ ಮಾಹಿತಿಯಿದೆ. ನನ್ನ ಸಾವಿಗೆ ಗೊತ್ತಿಲ್ಲದಿರುವ ಆ ಮಹಿಳೆಯೇ ಕಾರಣ ಎಂದು ಸಾವಿಗೂ ಮುನ್ನ ಡೆತ್ ನೋಟ್ನಲ್ಲಿ ಬರೆದಿದ್ದಾರೆ.
ಈ ಹಿನ್ನೆಲೆಯಲ್ಲಿ ಶ್ರೀಗಳ ಆತ್ಮಹತ್ಯೆ ಹಿಂದೆ ಸ್ಥಳೀಯ ಸ್ವಾಮೀಜಿಯೊಬ್ಬರ ಕೈವಾಡ ಇರುವ ಅನುಮಾನ ಹೆಚ್ಚಾಗಿದ್ದು ಅವರೊಂದಿಗೆ ಏಳೆಂಟು ಮಂದಿ ಸಹ ಕೈ ಜೋಡಿಸಿರುವ ಶಂಕೆಯನ್ನು ಪರಿಶೀಲನೆ ನಡೆಸಲಾಗಿದೆ ಎಂದರು.
ಮೊಬೈಲ್ ಸಂಖ್ಯೆ ಪತ್ತೆ:
ಆತ್ಮಹತ್ಯೆ ದಿನ ಶ್ರೀಗಳ ಮೊಬೈಲ್ ಸೀಜ್ ಮಾಡಿ ಎಫ್ ಎಸ್ ಎಲ್ ಗೆ ಕಳಿಸಿದ್ದ ಮೊಬೈಲ್ ನ ಸಂಪೂರ್ಣ ವಿವರ ಬಂದಿದ್ದು ಮೂರು ವೀಡಿಯೋಗಳನ್ನ ಸ್ವಾಮೀಜಿಗೆ ಮೊಬೈಲ್ ನಲ್ಲಿ ಕಳುಹಿಸಲಾಗಿದೆ. ಅದರಲ್ಲಿ ಮಹಿಳೆಯ ಮುಖ ಕಾಣದಂತೆ ಎಡಿಟ್ ಮಾಡಲಾಗಿದೆ.
ಸ್ವಾಮೀಜಿಗೆ ವೀಡಿಯೋ ಕಾಲ್ ರೆಕಾರ್ಡ್ ಕಳಿಸಿರುವ ಆ ಮಹಿಳೆಯ ಮೊಬೈಲ್ ನಂಬರ್ ಪತ್ತೆ ಮಾಡಲಾಗಿದೆ. ಮಹಿಳೆಯ ಬಂಧನಕ್ಕೆ ಬಲೆ ಬೀಸಿರುವ ಪೊಲೀಸರು ಇಂದು ಅಥವಾ ನಾಳೆ ಒಳಗಾಗಿ ಅರೆಸ್ಟ್ ಮಾಡುವ ಸಾಧ್ಯತೆ ಇದೆ.
ಮಹಿಳೆ ವಿಚಾರಣೆ ಬಳಿಕ ಮಹಿಳೆ ಹಿಂದಿರುವ ಕಾಣದ ಕೈಗಳು ಸಹ ಹೊರಗೆ ಬರುವ ಸಾಧ್ಯತೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.
ಈ ನಡುವೆ ಸ್ವಾಮೀಜಿಗೆ ಆಪ್ತರಾಗಿದ್ದ ಕಾರು ಚಾಲಕ ಮತ್ತು ಮಠದ ಅರ್ಚಕರ ಮೊಬೈಲ್ ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ವಿಡಿಯೋ ವೈರಲ್ ಆದ ಬಳಿಕ ವಿಡಿಯೋ ಮಾಡಿದವರು ಯಾರು ಎಂಬುದನ್ನು ಕಂಡುಹಿಡಿಯಲು ಪೊಲೀಸರು ಮೂವರು ಮಹಿಳೆಯರನ್ನು ವಿಚಾರಣೆ ನಡೆಸುತ್ತಿದ್ದಾರೆ.
ಮತ್ತೊಂದು ಆತ್ಮಹತ್ಯೆ ಪತ್ರವನ್ನು ಮಠದಲ್ಲಿನ ಯಾರೊ ತೆಗೆದುಕೊಂಡು ಹೋಗಿದ್ದಾರೆ ಎಂದು ಪೊಲೀಸರು ಶಂಕಿಸಿದ್ದಾರೆ ಮತ್ತು ಅದನ್ನು ಪೊಲೀಸರಿಗೆ ಹಸ್ತಾಂತರಿಸದಿದ್ದರೆ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.
ಸ್ವಾಮೀಜಿ ಆತ್ಮಹತ್ಯೆಯಲ್ಲಿ ಮಹಿಳೆ ಭಾಗಿಯಾಗಿದ್ದಾಳೆ ಎಂಬ ಬಗ್ಗೆ ಪೊಲೀಸರಿಗೆ ಇನ್ನೂ ದೃಢೀಕರಣ ಸಿಕ್ಕಿಲ್ಲ. ಪ್ರಾಥಮಿಕ ತನಿಖೆ ಅಂಶಗಳ ಪ್ರಕಾರ, ಸ್ವಾಮೀಜಿ ಕೆಲವು ವೈಯಕ್ತಿಕ ಸಮಸ್ಯೆಗಳ ಒತ್ತಡದಲ್ಲಿದ್ದರು ಎಂದು ತಿಳಿದುಬಂದಿದೆ.