ದೇವಸ್ಥಾನಗಳ ಆವರಣದಲ್ಲಿ ಆರ್‌ಎಸ್‌ಎಸ್‌ ಚಟುವಟಿಕೆ ನಿಷೇಧ: ಸಮರ್ಥಿಸಿದ ಸಚಿವ ರಾಧಾಕೃಷ್ಣನ್

Prasthutha|

- Advertisement -

ತಿರುವನಂತಪುರ: ತನ್ನ ವ್ಯಾಪ್ತಿಯ ದೇವಸ್ಥಾನಗಳ ಆವರಣದಲ್ಲಿ ಆರ್‌ಎಸ್‌ಎಸ್‌ ಚಟುವಟಿಕೆಗಳನ್ನು ನಿಷೇಧಿಸಿ ತಿರುವಾಂಕೂರು ದೇವಸ್ಥಾನ ಮಂಡಳಿಯು ಸುತ್ತೋಲೆ ಹೊರಡಿಸಿದ್ದನ್ನು ಕೇರಳದ ಮುಜರಾಯಿ ಸಚಿವ ಕೆ. ರಾಧಾಕೃಷ್ಣನ್ ಸಮರ್ಥಿಸಿಕೊಂಡಿದ್ದಾರೆ.

ಈ ಸುತ್ತೋಲೆಯ ಉದ್ದೇಶ ದೇವಾಲಯಗಳ ಆವರಣದಲ್ಲಿ ಶಾಂತಿಯುತ ವಾತಾವರಣ ಇರಬೇಕು ಎಂದು ಮಾತ್ರವಾಗಿದೆಯೇ ಹೊರತು
ಯಾರನ್ನಾದರೂ ದೇವಸ್ಥಾನದ ಆವರಣದಿಂದ ದೂರ ಇಡುವುದಲ್ಲ
ಎಂದು ರಾಧಾಕೃಷ್ಣನ್‌ ತಿಳಿಸಿದ್ದಾರೆ.

- Advertisement -

ಪ್ರಾರ್ಥನಾ, ಪೂಜಾ ಸ್ಥಳಗಳು ಎಂದಿಗೂ ಶಾಂತಿಯ ತಾಣಗಳಾಗಿರಬೇಕು. ಎಲ್ಲ ಭಕ್ತರು ಶಾಂತಿಯುತ ವಾತಾವರಣದಲ್ಲಿ ಪ್ರಾರ್ಥನೆ ಸಲ್ಲಿಸುವಂತೆ ಇರಬೇಕು. ಅದರರ್ಥ ದೇಗುಲ ಪ್ರವೇಶಿಸುವ ಯಾರನ್ನಾದರೂ ತಪಾಸಣೆಗೆ ಒಳಪಡಿಸಲಾಗುತ್ತದೆ ಎಂಬುದಲ್ಲ ಎಂದಿದ್ದಾರೆ.

ದೇವಸ್ಥಾನ ಮಂಡಳಿ ಆಯುಕ್ತರು ಅ. 20ರಂದು ಸುತ್ತೋಲೆ ಹೊರಡಿಸಿದ್ದರು. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪರ ವಿರೋಧ ಚರ್ಚೆ ಆರಂಭವಾಗಿದ್ದರಿಂದ ಮುಜರಾಯಿ ಸಚಿವರು ಈ ಹೇಳಿಕೆ ನೀಡಿದ್ದಾರೆ.

ದೇವಸ್ಥಾನದ ಆವರಣದಲ್ಲಿ ‘ನಾಮ ಜಪ’ ಪ್ರತಿಭಟನೆಯನ್ನು ನಿಷೇಧಿಸಲಾಗಿದೆ ಎಂದೂ ದೇವಸ್ವಂ ಮಂಡಳಿಯ ಸುತ್ತೋಲೆಯಲ್ಲಿ ತಿಳಿಸಲಾಗಿತ್ತು.

ತಿರುವನಂತಪುರ ಜಿಲ್ಲೆಯ ಶಾರ್ಕರದೇವಿ ದೇವಸ್ಥಾನದ ಆವರಣದಲ್ಲಿ ಸಾಮೂಹಿಕ ಕಸರತ್ತು ಮತ್ತು ಶಸ್ತ್ರಾಸ್ತ್ರ ತರಬೇತಿ ನಡೆಸುವಂತಿಲ್ಲ ಎಂದು ಸೂಚಿಸಿ ಕೇರಳ ಹೈಕೋರ್ಟ್‌ ಕಳೆದ ತಿಂಗಳಷ್ಟೇ ಆದೇಶವನ್ನು ಹೊರಡಿಸಿತ್ತು.



Join Whatsapp