ಜಾತ್ರೆಗಳಲ್ಲಿ ಮುಸ್ಲಿಮ್ ವ್ಯಾಪಾರಿಗಳಿಗೆ ನಿಷೇಧ; ಸರ್ಕಾರ ಮಧ್ಯಪ್ರವೇಶ ಸಾಧ್ಯವಿಲ್ಲ: ಕಾನೂನು ಸಚಿವ ಮಾಧುಸ್ವಾಮಿ

Prasthutha|

ಕರ್ನಾಟಕ ಸರ್ಕಾರದ ನಡೆಗೆ ಪ್ರತಿಪಕ್ಷ ನಾಯಕರ ಆಕ್ರೋಶ

- Advertisement -

ಬೆಂಗಳೂರು: ಹಲವು ಹಿಂದೂ ದೇಗುಲಗಳಲ್ಲಿ ವರ್ಷಂಪ್ರತಿ ನಡೆಯುವ ಜಾತ್ರೆಗಳಲ್ಲಿ ಈ ಸಲ ಮುಸ್ಲಿಮ್ ವ್ಯಾಪಾರಿಗಳಿಗೆ ನಿಷೇಧ ಹೇರಿರುವ ಕುರಿತು ಸದನದಲ್ಲಿ ತೀವ್ರ ಚರ್ಚೆ ನಡೆದಿದ್ದು, ಈ ವಿಚಾರದಲ್ಲಿ ಸರ್ಕಾರ ಮಧ್ಯಪ್ರವೇಶಿಸಲು ಸಾಧ್ಯವಿಲ್ಲ ಎಂದು ಕಾನೂನು ಸಚಿವ ಜೆಸಿ ಮಾಧುಸ್ವಾಮಿ ಬುಧವಾರ ವಿಧಾನಸಭೆಗೆ ತಿಳಿಸಿದ್ದಾರೆ.

ಸರ್ಕಾರದ ಈ ಪ್ರತಿಕ್ರಿಯೆಯಿಂದ ಅಸಮಾಧಾನಗೊಂಡ ವಿಪಕ್ಷ ನಾಯಕ ಸಿದ್ದರಾಮಯ್ಯ, ಉಪನಾಯಕ ಯು.ಟಿ.ಖಾದರ್, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಕುಮಾರಸ್ವಾಮಿ ಸೇರಿದಂತೆ ಹಲವು ಪ್ರತಿಪಕ್ಷ ನಾಯಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

- Advertisement -

ಕರಾವಳಿಯಲ್ಲಿ ನಡೆಯುವ ಹಿಂದೂ ಧಾರ್ಮಿಕ ಜಾತ್ರೆಗಳಲ್ಲಿ ಮುಸ್ಲಿಮ್ ವ್ಯಾಪಾರಿಗಳಿಗೆ ನಿಷೇಧ ಹೇರಿರುವ ವಿಚಾರಕ್ಕೆ ಸಂಬಂಧಿಸಿದಂತೆ ಕಾವೇರಿದ ಚರ್ಚೆಯ ಹಿನ್ನೆಲೆಯಲ್ಲಿ ಸಚಿವ ಮಾಧುಸ್ವಾಮಿ ಈ ಮೇಲಿನಂತೆ ಉತ್ತರಿಸಿದ್ದಾರೆ.

ಧಾರ್ಮಿಕ ಕೇಂದ್ರದ ಆವರಣ ಅಥವಾ ಹೊರಗಡೆಗೆ ಈ ಆದೇಶ ಅನ್ವಯವಾಗಲಿದೆಯೇ ಎಂಬುವುದರ ಕುರಿತು ಸರ್ಕಾರ ಪರಿಶೀಲನೆ ನಡೆಸುವುದಾಗಿ ಅವರು ಈ ವೇಳೆ ಅವರು ತಿಳಿಸಿದ್ದಾರೆ.

2002 ರಲ್ಲಿ ರೂಪಿಸಲಾದ ಹಿಂದೂ ಧಾರ್ಮಿಕ ಕೇಂದ್ರ ಮತ್ತು ದತ್ತಿ ಕಾಯ್ದೆಯ ನಿಯಮಗಳ ಪ್ರಕಾರ ಹಿಂದೂ ಧಾರ್ಮಿಕ ಕೇಂದ್ರದ ಸಮೀಪದ ಜಾಗವನ್ನು ಅನ್ಯ ಧರ್ಮೀಯರಿಗೆ ವ್ಯಾಪಾರಕ್ಕೆ ನೀಡುವುದನ್ನು ನಿಷೇಧಿಸಲಾಗಿದೆ. ಇದೀಗ ಮುಸ್ಲಿಮ್ ವ್ಯಾಪಾರಿಗೆ ಹೇರಿರುವ ನಿಷೇಧ ಆವರಣದ ಧಾರ್ಮಿಕ ಕೇಂದ್ರದ ಹೊರಗಡೆ ನಡೆದಿದ್ದರೆ ನಾವು ಸರಿಪಡಿಸುತ್ತೇವೆ. ಇಲ್ಲದೇ ಹೋದಲ್ಲಿ ನಿಯಮಾನುಸಾರವಾಗಿ ಅನ್ಯ ಸಮುದಾಯದವರು ಅಂಗಡಿಗಳನ್ನು ಇಡುವಂತಿಲ್ಲ ಎಂದು ಮಾಧುಸ್ವಾಮಿ ತಿಳಿಸಿದ್ದಾರೆ.

ಈ ನಿಯಮಾವಳಿಯನ್ನು ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ರೂಪಿಸಲಾಗಿದೆ ಎಂದು ಅವರು ಸದನಕ್ಕೆ ತಿಳಿಸಿದ್ದಾರೆ.

ಈ ಮಧ್ಯೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನಿಯಮಗಳ ಅನ್ವಯವನ್ನು ಪರಿಶೀಲಿಸುವ ಮೂಲಕ ಸಮಸ್ಯೆಯನ್ನು ಪರಿಶೀಲಿಸುವುದಾಗಿ ಸದನಕ್ಕೆ ಭರವಸೆ ನೀಡಿದ್ದಾರೆ.

ಶೂನ್ಯ ವೇಳೆಯಲ್ಲಿ ಮಾತನಾಡಿದ ವಿಪಕ್ಷ ಉಪನಾಯಕ ಯು.ಟಿ.ಖಾದರ್, ಮುಸ್ಲಿಮ್ ವ್ಯಾಪಾರಿಗಳನ್ನು ನಿಷೇಧಿಸುವಂತೆ ಒತ್ತಾಯಿಸಿ ಬ್ಯಾನರ್ ಮತ್ತು ಪೋಸ್ಟರ್ ಹಾಕುತ್ತಿರುವವರು ಹೇಡಿಗಳು ಎಂದು ಅವರು ಸದನದಲ್ಲಿ ನೀಡಿದ ಹೇಳಿಕೆಗೆ ಬಿಜೆಪಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.

ಶಾಸಕ ಅರ್ಷದ್ ಕೂಡ ಈ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ್ದು, ಅಲ್ಪಸಂಖ್ಯಾತ ಸಮುದಾಯದ ಸಾಂವಿಧಾನಿಕ ಹಕ್ಕುಗಳನ್ನು ರಕ್ಷಿಸುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.



Join Whatsapp