ಈದ್ಗಾದಲ್ಲಿ ಗಣೇಶೋತ್ಸವಕ್ಕೆ ನಿರ್ಬಂಧ: ಮೈದಾನದಲ್ಲಿ ಪೊಲೀಸ್ ಭದ್ರತೆ ಹೆಚ್ಚಳ

Prasthutha|

ಬೆಂಗಳೂರು: ಹಿಂದುತ್ವಪರ ಸಂಘಟನೆಗಳ ಮುಖಂಡರು ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಸಜ್ಜಾಗಿದ್ದು,ಚಾಮರಾಜಪೇಟೆಯ ಈದ್ಗಾ ಮೈದಾನದಲ್ಲಿ ಗಣೇಶೋತ್ಸವಕ್ಕೆ ಅನುಮತಿಯಿಲ್ಲ ಎಂದು ಸುಪ್ರೀಂ ಕೋರ್ಟ್ ತೀರ್ಪು ಹೊರಬೀಳುತ್ತಿದ್ದಂತೆ ಇದೀಗ ಮೈದಾನದಲ್ಲಿ ಪೊಲೀಸ್ ಭದ್ರತೆ ಹೆಚ್ಚಿಸಲಾಗಿದೆ.

- Advertisement -

ಸಂಜೆ ಕೋರ್ಟ್‌ ಆದೇಶ ಹೊರಬೀಳುತ್ತಿದ್ದಂತೆ ಪೆಂಡಾಲ್‌ ನಿರ್ಮಾಣ ಕಾರ್ಯ ಸ್ಥಗಿತಗೊಳಿಸಿದ್ದು, ಮೈದಾನದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಬಂದೋಬಸ್ತ್‌ ಕೈಗೊಳ್ಳಲಾಗಿದೆ. ಪಶ್ಚಿಮ ವಿಭಾಗದ ರೌಡಿ ಪಟ್ಟಿಯಲ್ಲಿರುವ ವ್ಯಕ್ತಿಗಳ ಮನೆಗಳ ಮೇಲೆ ದಾಳಿ ನಡೆಸಿ ಮಾರಕಾಸ್ತ್ರ ವಶಕ್ಕೆ ಪಡೆಯಲಾಗಿದೆ. ಅವರಿಗೆ ಎಚ್ಚರಿಕೆ ನೀಡಲಾಗಿದೆ ಎಂದು ಹೆಚ್ಚುವರಿ ಪೊಲೀಸ್‌ ಆಯುಕ್ತ ಸಂದೀಪ್‌ ಪಾಟೀಲ್‌ ಹೇಳಿದರು.

ನಗರದಲ್ಲಿ ಶಾಂತಿ ಕಾಪಾಡಲು ಬೇಕಾದ ಎಲ್ಲ ಭದ್ರತಾ ಕ್ರಮ ಕೈಗೊಳ್ಳಲಾಗಿದೆ. ಸಾರ್ವಜನಿಕರೂ ಸಹಕಾರ ನೀಡಬೇಕು. ಹೆಚ್ಚಿನ ನಿಗಾ ಇಡಲು ಡ್ರೋನ್‌ ಬಳಸಲಾಗುತ್ತಿದೆ ಎಂದರು.

- Advertisement -

ಸೂಕ್ಷ್ಮ ಪ್ರದೇಶದಲ್ಲಿ ಸಾವಿರಕ್ಕೂ ಹೆಚ್ಚು ಪೊಲೀಸ್‌ ಸಿಬ್ಬಂದಿ ಮಂಗಳವಾರ ಪಥಸಂಚಲನ ನಡೆಸಿ ಸ್ಥಳೀಯರಲ್ಲಿ ಧೈರ್ಯ ತುಂಬಿದರು. ಸೋಮವಾರ ಜೆಜೆ ನಗರ ವ್ಯಾಪ್ತಿಯ ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸರು ಪಥಸಂಚಲನ ನಡೆಸಿದ್ದರು. ಮೈದಾನದ ಸುತ್ತಲೂ ಸಿಸಿ ಟಿ.ವಿ ಕ್ಯಾಮೆರಾ ಅಳವಡಿಸಲಾಗಿದೆ.

Join Whatsapp