ಕರೂರು : ಪಾಕಿಸ್ತಾನದ ಬಾಲಕೋಟ್ ಮೇಲೆ 2019ರಲ್ಲಿ ಭಾರತ ನಡೆಸಿದ ವೈಮಾನಿಕ ದಾಳಿಯ ಮುಂಚಿತ ಮಾಹಿತಿ ಪ್ರಧಾನಿ ನರೇಂದ್ರ ಮೋದಿ ಅವರ ಮೂಲಕ ರಿಪಬ್ಲಿಕ್ ಟಿವಿ ಸಂಪಾದಕ ಅರ್ನಾಬ್ ಗೋಸ್ವಾಮಿಗೆ ಲಭಿಸಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆಪಾದಿಸಿದ್ದಾರೆ. ಇಲ್ಲಿ ನಡೆದ ರೋಡ್ ಶೋ ಒಂದರಲ್ಲಿ ಭಾಗವಹಿಸಿದ ಅವರು ಈ ಗಂಭೀರ ಆರೋಪ ಮಾಡಿದ್ದಾರೆ.
ಪ್ರಧಾನಿ, ರಕ್ಷಣಾ ಸಚಿವರು, ರಾಷ್ಟ್ರೀಯ ಭದ್ರತಾ ಸಲಹೆಗಾರ, ವಾಯುಪಡೆ ಮುಖ್ಯಸ್ಥ ಹಾಗೂ ಗೃಹ ಸಚಿವರಿಗಷ್ಟೇ ಪೂರ್ವ ನಿಯೋಜಿತ ದಾಳಿಯ ಮಾಹಿತಿ ಇರುತ್ತದೆ. ಕೆಲ ದಿನಗಳ ಹಿಂದೆಯಷ್ಟೇ ಪತ್ರಕರ್ತರೊಬ್ಬರಿಗೆ ಬಾಲಕೋಟ್ ದಾಳಿಯ ಮಾಹಿತಿ ಎಂದು ವರದಿ ಬಂದಿದೆ. ಪಾಕಿಸ್ತಾನದ ಮೇಲೆ ಭಾರತೀಯ ವಾಯು ಪಡೆಯ ದಾಳಿ ನಡೆಯುತ್ತದೆ ಎಂದು ಭಾರತೀಯ ಪತ್ರಕರ್ತರೊಬ್ಬರು ಹೇಳಿದ್ದರು ಎಂದು ಅವರು ಹೇಳಿದರು.
ಬಾಲಾಕೋಟ್ ದಾಳಿಯ ಬಗ್ಗೆ ಯಾರಿಗೂ ತಿಳಿದಿರಲಿಲ್ಲ. ದಾಳಿಯ ಬಳಿಕವಷ್ಟೇ ಎಲ್ಲರಿಗೂ ವಿಷಯ ತಿಳಿಯಿತು. ಆ ಪತ್ರಕರ್ತನಿಗೆ ದಾಳಿಯ ಮುಂಚಿತವಾಗಿಯೇ ಮಾಹಿತಿ ನೀಡಿದ್ದವರು ಯಾರು ಎಂಬುದನ್ನು ಪತ್ತೆ ಹಚ್ಚಲು ಇಲ್ಲಿವರೆಗೂ ಏಕೆ ತನಿಖೆ ಆರಂಭಿಸಿಲ್ಲ. ಆ ಐದು ಜನರಲ್ಲೇ ಒಬ್ಬರು ಅವರಿಗೆ ಮಾಹಿತಿ ನೀಡಿರುವುದೇ ಇದಕ್ಕೆ ಕಾರಣ. ಈ ಐವರಲ್ಲಿ ಓರ್ವರು ನಮ್ಮ ವಾಯುಪಡೆಗೆ ದ್ರೋಹ ಎಸಗಿದ್ದಾರೆ. ಇದು ಸತ್ಯವಾಗಿದ್ದಲ್ಲಿ, ಇವರಲ್ಲೊಬ್ಬರು ನಮ್ಮ ವಾಯುಪಡೆಯ ಪೈಲಟ್ ಗಳ ಜೀವವನ್ನು ಅಪಾಯಕ್ಕೆ ದೂಡಿದ್ದರು ಎಂದರು.
ಆರೋಪ ಸುಳ್ಳಾಗಿದ್ದಲ್ಲಿ ತನಿಖೆ ನಡೆಸಲಿ ಈ ಐವರಲ್ಲಿ ಮಾಹಿತಿ ಸೋರಿಕೆ ಮಾಡಿದವರು ಯಾರು ಎಂಬುದನ್ನು ಪ್ರಧಾನಿ ತಿಳಿಸಲಿ ಎಂದು ರಾಹುಲ್ ಗಂಧಿ ಆಗ್ರಹಿಸಿದರು.