ಭದ್ರಾವತಿ: ಕೋಳಿ ಅಂಗಡಿಗೆ ಬಂದು ಹಲಾಲ್ ಮಾಡದ ಚಿಕನ್ ನೀಡುವಂತೆ ಗದ್ದಲವೆಬ್ಬಿಸಿದ ಬಜರಂಗದಳದ ಕಾರ್ಯಕರ್ತರು, ಅಂಗಡಿ ಮಾಲೀಕ ಹಾಗೂ ಕಾರ್ಮಿಕನಿಗೆ ತೀವ್ರವಾಗಿ ಹಲ್ಲೆ ನಡೆಸಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ಬುಧವಾರ ನಡೆದಿದೆ.
ಕೋಳಿ ಅಂಗಡಿ ಮಾಲೀಕ ಸಯ್ಯದ್ ಅನ್ಸಾರ್ ಹಾಗೂ ಅವರ ಸಂಬಂಧಿ ತೌಸೀಫ್ ಹಲ್ಲೆಗೊಳಗಾದವರು. ಸಯ್ಯದ್ ಅನ್ಸಾರ್ ಅವರು ಭದ್ರಾವತಿಯ ಶಿವಾಜಿ ಸರ್ಕಲ್ ನಲ್ಲಿ ಕಳೆದ ಐದು ವರ್ಷಗಳಿಂದ ಕೋಳಿ ಅಂಗಡಿ ನಡೆಸುತ್ತಿದ್ದಾರೆ.
ಬುಧವಾರ ಮಧ್ಯಾಹ್ನ ಕೋಳಿ ಅಂಗಡಿಗೆ ಬಂದ ವಡಿವೇಲು, ಶ್ರೀಕಾಂತ್, ಕೃಷ್ಣ, ಗುಂಡ ಮತ್ತಿತರ ಬಜರಂಗದಳದ ಕಾರ್ಯಕರ್ತರು ಹಲಾಲ್ ಮಾಡದ ಚಿಕನ್ ನೀಡುವಂತೆ ಅನ್ಸಾರ್ ಅವರ ಸಂಬಂಧಿ ತೌಸೀಫ್ ಅವರಿಗೆ ಕೇಳಿದ್ದಾರೆ. ಆಗ ತೌಸೀಫ್, ಇಲ್ಲಿ ಹಲಾಲ್ ಮಾಡಿದ ಚಿಕನ್ ಮಾತ್ರ ಸಿಗುತ್ತದೆ ಎಂದು ಹೇಳಿದ್ದಾರೆ. ಆಗ ನಮಗೆ ತಕ್ಷಣ ಹಲಾಲ್ ಮಾಡದ ಚಿಕನ್ ಕೊಡಬೇಕು ಎಂದು ಹೇಳಿ ಗದ್ದಲವೆಬ್ಬಿಸಿ ಅವಾಚ್ಯ ಶಬ್ಧಗಳಿಂದ ನಿಂದಿಸಿ ನಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಸಯ್ಯದ್ ಅನ್ಸಾರ್ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.
ನಾವು ಮುಸ್ಲಿಮರು, ಹಲಾಲ್ ಅಲ್ಲದೆ ಚಿಕನ್ ತಿನ್ನುವುದಿಲ್ಲ. ನಿಮಗೆ ಬೇಕಿದ್ದರೆ ಬೇರೆ ಅಂಗಡಿಯಿಂದ ತರಿಸಿಕೊಡುವುದಾಗಿ ಹೇಳಿದರೂ ನಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಸಯ್ಯದ್ ಆರೋಪಿಸಿದ್ದಾರೆ.
ಹಿಜಾಬ್ ವಿವಾದದ ಬಳಿಕ ಸಂಘಪರಿವಾರ ಹಲಾಲ್ ವಿಷಯವನ್ನು ಮುಂದಿಟ್ಟು ಮುಸ್ಲಿಮ್ ವ್ಯಾಪಾರಿಗಳನ್ನು ಗುರಿಪಡಿಸುತ್ತಿರುವ ಘಟನೆಗಳು ಹೆಚ್ಚಾಗುತ್ತಿದೆ.