ಮಂಗಳೂರು: ಪ್ರಕರಣವೊಂದಕ್ಕೆ ಸಂಬಂಧಿಸಿ ನ್ಯಾಯಯುತವಾಗಿ ತನಿಖೆ ನಡೆಸಿದ ಪೊಲೀಸ್ ಇನ್ಸ್ ಪೆಕ್ಟರ್ ಮತ್ತು ಸಿಬ್ಬಂದಿಯನ್ನು ಸಂಘಪರಿವಾರದ ಒತ್ತಡಕ್ಕೆ ಮಣಿದು ಅಮಾನತುಗೊಳಿಸಿರುವುದು ಖಂಡನೀಯ ಎಂದು SDPI ಜಿಲ್ಲಾಧ್ಯಕ್ಷ ಅಬೂಬಕ್ಕರ್ ಕುಳಾಯಿ ತಿಳಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಕಳೆದ ಹಲವಾರು ವರ್ಷಗಳಿಂದ ಮೂಡಬಿದಿರೆ ನಿವಾಸಿ ಇಸ್ಮಾಯಿಲ್ ಎಂಬವರು ಬಜಪೆ ಸೇರಿದಂತೆ ವಿವಿಧ ಕಡೆಗಳಲ್ಲಿ ಎಳನೀರು ವ್ಯಾಪಾರವನ್ನು ನಡೆಸುತ್ತಿದ್ದರು. ಆದರೆ ಇತ್ತೀಚೆಗೆ ಕಟೀಲು ಎಂಬಲ್ಲಿ ಅಂಗಡಿಗಳಿಗೆ ಎಳನೀರು ಸರಬರಾಜು ಮಾಡುತ್ತಿದ್ದಾಗ ಸಂಘಪರಿವಾರದ ಗೂಂಡಾಗಳು ವ್ಯಾಪಾರಕ್ಕೆ ತಡೆಯೊಡ್ಡಿ ಹಲ್ಲೆಗೆ ಯತ್ನಿಸಿದ್ದು ಅಲ್ಲದೇ ಮುಸ್ಲಿಂ ವ್ಯಾಪಾರಿಗಳಿಗೆ ನಾವು ಬಹಿಷ್ಕಾರ ಮಾಡಿದ್ದೇವೆ , ಇಲ್ಲಿ ನಿಮಗೆ ವ್ಯಾಪಾರಕ್ಕೆ ಅವಕಾಶ ಇಲ್ಲ ಎಂದು ನಿಂದನೆ ಮಾಡಿದ್ದಾರೆ. ಇದರ ವಿರುದ್ಧ ಬಜ್ಪೆ ಪೊಲೀಸ್ ಠಾಣೆಗೆ ಇಸ್ಮಾಯಿಲ್ ದೂರು ನೀಡಿದ್ದರು. ದೂರು ಸ್ವೀಕರಿಸಿದ ಬಜ್ಪೆ ಪೊಲೀಸ್ ಇನ್ಸ್ ಪೆಕ್ಟರ್ ತನಿಖೆ ನಡೆಸಿ ಮೂರು ಮಂದಿ ಸಂಘಪರಿವಾರದ ಗೂಂಡಾಗಳನ್ನು ಬಂಧಿಸಿದ್ದರು. ಇದನ್ನೇ ನೆಪವಾಗಿಟ್ಟುಕೊಂಡು ಸಂಘಪರಿವಾರ ಸಂಘಟನೆಗಳು ಬಜ್ಪೆ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿದ್ದವು. ಮಾತ್ರವಲ್ಲ ಬಿಜೆಪಿ ಶಾಸಕರ ಮೂಲಕ ಇಲಾಖೆಯ ಮೇಲೆ ಒತ್ತಡ ಹಾಕಿದೆ. ಸಂಘಪರಿವಾರದ ಒತ್ತಡಕ್ಕೆ ಮಣಿದು ನ್ಯಾಯಯುತವಾಗಿ ತನಿಖೆ ನಡೆಸಿದ ಪೊಲೀಸ್ ಇನ್ಸ್ ಪೆಕ್ಟರ್ ಮತ್ತು ಸಿಬ್ಬಂದಿಯನ್ನು ಸರಕಾರ ಇಲಾಖೆಯ ಮೂಲಕ ಅಮಾನತು ಮಾಡಿದೆ.ಇದು ಸಮಾಜದಲ್ಲಿ ಅರಾಜಕತೆ ಸೃಷ್ಟಿಸುವ ಗೂಂಡಾಗಳಿಗೆ ಸರಕಾರ ಪರೋಕ್ಷ ಬೆಂಬಲ ನೀಡಿದಂತಾಗಿದೆ. ಇಂತಹ ರಾಜಕೀಯ ಪ್ರೇರಿತ ಅಮಾನತುಗಳಿಂದ ಪೊಲೀಸ್ ಇಲಾಖೆಯ ಆತ್ಮಸ್ಥೈರ್ಯ ಕುಗ್ಗಿದಂತಾಗುತ್ತದೆ ಎಂದು ಟೀಕಿಸಿದ್ದಾರೆ.
ದಕ್ಷ ಪೊಲೀಸ್ ಅಧಿಕಾರಿಯಾಗಿರುವ ಮಂಗಳೂರು ನಗರ ಪೊಲೀಸ್ ಆಯುಕ್ತರು ಒತ್ತಡಗಳಿಗೆ ಮಣಿಯದೆ ಕೂಡಲೇ ಅಮಾನತು ಪ್ರಕ್ರಿಯೆಯನ್ನು ಹಿಂಪಡೆಯಬೇಕು. ಪೊಲೀಸ್ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು ನೆಮ್ಮದಿಯಿಂದ ಕೆಲಸ ನಿರ್ವಹಿಸಲು ಸರಕಾರ ಮತ್ತು ಇಲಾಖೆಯ ಉನ್ನತ ಮಟ್ಟದ ಅಧಿಕಾರಿಗಳು ಅವಕಾಶವನ್ನು ಮಾಡಿಕೊಡಬೇಕು. ಇಲ್ಲದಿದ್ದರೆ ಬಜಪೆ ಪೊಲೀಸ್ ಠಾಣೆ ಮುಂಭಾಗ ಸೇರಿದಂತೆ ಜಿಲ್ಲೆಯಲ್ಲಿ ಪಕ್ಷದ ವತಿಯಿಂದ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಅಬೂಬಕ್ಕರ್ ಕುಳಾಯಿ ಎಚ್ಚರಿಸಿದ್ದಾರೆ.