ಮಂಗಳೂರು ಲೇಡಿಹಿಲ್ ವೃತ್ತಕ್ಕೆ ಬಲವಂತದಿಂದ ಮರುನಾಮಕರಣ ಮಾಡಿದ ಬಜರಂಗದಳ !

Prasthutha|

►ಸಂಘಟನೆಯ ಕಾನೂನು ವಿರೋಧಿ ನಡೆಗೆ ಮೂಕ ಪ್ರೇಕ್ಷಕನಾಗಿ ನಿಂತಿರುವ ಪಾಲಿಕೆ 
►ಟ್ಯಾಬ್ಲೋ ತಿರಸ್ಕರಿಸಿದ ಮೋದಿ ಸರಕಾರದ ತಪ್ಪನ್ನು ಮರೆಮಾಚುವ ತಂತ್ರ ?

- Advertisement -

ಮಂಗಳೂರು : ನಗರದ ಲೇಡಿಹಿಲ್ ವೃತ್ತಕ್ಕೆ ಬಜರಂಗದಳದ ಕಾರ್ಯಕರ್ತರು ನಿನ್ನೆ ಬಲವಂತದಿಂದ “ಬ್ರಹ್ಮಶ್ರೀ ನಾರಾಯಣಗುರು ವೃತ್ತ ಬಜರಂಗದಳ”  ಎಂಬ ಹೆಸರನ್ನು ಮರುನಾಮಕರಣ ಮಾಡಿ ಫಲಕ ಅಳವಡಿಸಿದ್ದಾರೆ. ಆದರೆ ಇದರ ವಿರುದ್ಧ ಮಂಗಳೂರು ನಗರ ಪಾಲಿಕೆಯಾಗಲೀ, ನಗರ ಪೊಲೀಸರಾಗಲೀ  ಯಾವೊಂದು ಕ್ರಮ ಕೈಗೊಳ್ಳದೇ ಮೂಕಪ್ರೇಕ್ಷಕರಾಗಿ ಕೈ ಕಟ್ಟಿ ಕುಳಿತುಕೊಂಡಿರುವ ಕುರಿತು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ದಶಕಗಳ ಕಾಲ ಲೇಡಿಹಿಲ್ ವೃತ್ತ ಎಂದೇ  ಖ್ಯಾತಿ ಪಡೆದಿದ್ದ ವೃತ್ತವನ್ನು ನಾರಾಯಣ ಗುರು ವೃತ್ತ  ಎಂದು ಮರುನಾಮಕರಣಗೊಳಿಸುವ ನಿರ್ಣಯವನ್ನು ಮಂಗಳೂರು ನಗರ ಪಾಲಿಕೆ ಇತ್ತಿಚೆಗೆ ಸ್ವೀಕರಿಸಿತ್ತು. ಅದರ ಅನುಮೋದನೆಗಾಗಿ ರಾಜ್ಯ ಸರಕಾರಕ್ಕೆ ಕಳುಹಿಸಲಾಗಿದೆಯಾದರೂ ಇದುವರೆಗೂ ಅನುಮೋದನೆಗೊಂಡಿಲ್ಲ.

- Advertisement -

ಇದರ ನಡುವೆ ಮಹಾನಗರಪಾಲಿಕೆಯ ನಿರ್ಣಯವನ್ನು ಜಿಲ್ಲೆಯ ಎಲ್ಲಾ ಪಕ್ಷಗಳು ವಿರೋಧಿಸಿದ್ದವು. ಹಲವು ಕ್ರೈಸ್ತ ಸಂಘಟನೆಗಳೂ ಕೂಡಾ ಇದರ ವಿರುದ್ಧ ಪ್ರತಿಭಟಿಸಿದ್ದವು. ಈ ನಡುವೆ ಮೋದಿ ನೇತೃತ್ವದ ಕೇಂದ್ರ ಸರಕಾರವು ಕೇರಳ ಸರಕಾರದ ಗಣರಾಜ್ಯೋತ್ಸವ ಪೆರೇಡಿನಲ್ಲಿನ ನಾರಾಯಣ ಗುರುಗಳ ಟ್ಯಾಬ್ಲೋವನ್ನು ತಿರಸ್ಕರಿಸಿತ್ತು. ತಾಂತ್ರಿಕ ಕಾರಣ ಎಂದು ಸರಕಾರ ಕಾರಣ ನೀಡಿತ್ತಾದರೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಲ್ಲವ ಸಂಘಟನೆಗಳು ಇದನ್ನು ತೀವ್ರವಾಗಿ ವಿರೋಧಿಸಿದ್ದವು.

ಇದೀಗ ಸಂಘಪರಿವಾರದ ಸಂಘಟನೆಗಳು ಕೇಂದ್ರ ಸರಕಾರದ ತಪ್ಪನ್ನು ಮರೆಮಾಚಲು ಮತು ಬಿಲ್ಲವ ಸಂಘಟನೆಗಳನ್ನು ಮೆಚ್ಚಿಸಲು ಲೇಡಿಹಿಲ್ ವೃತ್ತದ ಮರುನಾಮಕರಣ ವಿಚಾರವನ್ನು ಮತ್ತೆ ಮುನ್ನೆಲೆಗೆ ತಂದಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಇದಕ್ಕೆ ಪೂರಕವಾಗಿ ಬಜರಂಗದಳ ಯಾವುದೇ ಪೂರ್ವಾನುಮತಿ ಇಲ್ಲದೇ ಇದ್ದರೂ, ರಾಜ್ಯ ಸರಕಾರವು ಮಂಗಳೂರು ನಗರ ಪಾಲಿಕೆಯ ನಿರ್ಣಯವನ್ನು ಅಂಗೀಕರಿಸದೇ ಇದ್ದರೂ ಕೂಡಾ ಬಲವಂತವಾಗಿ ವೃತ್ತಕ್ಕೆ ನಾರಾಯಣ ಗುರುಗಳ ಹೆಸರನ್ನು ಇಟ್ಟಿದ್ದೂ ಅಲ್ಲದೆ, ಅದರ ಕೆಳಗಡೆ ಸಮಾಜ ವಿರೋಧಿ ಸಂಘಟನೆಯೊಂದರ ಹೆಸರನ್ನೂ  ತುರುಕಿಸಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

Join Whatsapp