ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ, ಇತರ ಗುತ್ತಿಗೆದಾರರಿಗೆ ಜಾಮೀನು

Prasthutha|

ಬೆಂಗಳೂರು: ಕ್ರಿಮಿನಲ್ ಮಾನನಷ್ಟ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿದ್ದ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರಿಗೆ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.

- Advertisement -


ಕೆಂಪಣ್ಣ ಸೇರಿ ಒಟ್ಟು 19 ಗುತ್ತಿಗೆದಾರರು ಸುದ್ದಿಗೋಷ್ಠಿ ಮಾಡಿ ತೋಟಗಾರಿಕಾ ಸಚಿವ ಮುನಿರತ್ನ ವಿರುದ್ಧ ಕಮಿಷನ್ ಆರೋಪ ಮಾಡಿದ್ದರು. ಈ ಸಂಬಂಧ ಸುಳ್ಳು ಆರೋಪ ಮಾಡಿದ್ದಾರೆ ಎಂದು ಆರೋಪಿಸಿ ಕೆಂಪಣ್ಣ ಸೇರಿ 19 ಗುತ್ತಿಗೆದಾರರ ವಿರುದ್ಧ ಮುನಿರತ್ನ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ಹೂಡಿದ್ದರು.
8ನೇ ಎಸಿಎಂಎಂ ನ್ಯಾಯಾಲಯ ಕೆಂಪಣ್ಣ ಸೇರಿ 19 ಮಂದಿಗೆ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ಜಾರಿ ಮಾಡಿತ್ತು. ವಿಚಾರಣೆಗೆ ಹಾಜರಾಗದ ಹಿನ್ನೆಲೆಯಲ್ಲಿ ಕೋರ್ಟ್ ಆರೋಪಿಗಳ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್ ಹೊರಡಿಸಿತ್ತು.


ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಕೇಂದ್ರ ವಿಭಾಗದ ಪೊಲೀಸರು ಆರೋಪಿಗಳಾದ ಕೆಂಪಣ್ಣ ಮತ್ತು ಇತರರನ್ನು ಬಂಧಿಸಿ ನ್ಯಾಯಾಧೀಶರ ಮುಂದೆ ನಿನ್ನೆ ತಡರಾತ್ರಿ ಹಾಜರು ಪಡಿಸಿದ್ದರು.
ವಿಚಾರಣೆ ನಡೆಸಿದ ನ್ಯಾಯಾಧೀಶರು ಕೆಂಪಣ್ಣ, ಕೃಷ್ಣಾರೆಡ್ಡಿ, ನಟರಾಜು, ಗುರುಸಿದ್ದಪ್ಪ, ಅಂಬಿಕಾಪತಿ ಸೇರಿ ಐವರಿಗೆ ಷರತ್ತುಬದ್ದ ಜಾಮೀನು ಮಂಜೂರು ಮಾಡಿದ್ದಾರೆ. ಜಾಮೀನು ಸಿಗುವ ಪ್ರಕರಣ ಆಗಿರುವ ಕಾರಣ ಎಲ್ಲಾ ಆರೋಪಿಗಳಿಗೆ ಜಾಮೀನು ಸಿಕ್ಕಿದೆ. ಉಳಿದ ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ ಎಂದು ಮುನಿರತ್ನ ಪರ ವಕೀಲ ವಿವೇಕ್ ಸುಬ್ಬಾರೆಡ್ಡಿ ತಿಳಿಸಿದ್ದಾರೆ.

Join Whatsapp