ಹೈದರಾಬಾದ್: ಸಚಿವರ ವಿರುದ್ಧ ಸಾಕ್ಷ್ಯಾಧಾರಗಳಿದ್ದ ಬ್ಯಾಗನ್ನು ನ್ಯಾಯಾಲಯದಿಂದ ಕಳವು ಮಾಡಿದ ಘಟನೆ ಹೈದರಾಬಾದ್ ನ್ಯಾಯಾಲಯದಲ್ಲಿ ನಡೆದಿದ್ದು, ಘಟನೆ ಸಂಬಂಧ ಆರು ಜನರ ಪೈಕಿ ಇಬ್ಬರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಏಪ್ರಿಲ್ 13 ರಂದು ನ್ಯಾಯಾಲಯದ ಗುಮಾಸ್ತರೊಬ್ಬರು ದಾಖಲಿಸಿದ ಕಳ್ಳತನದ ದೂರಿನ ಅನ್ವಯ ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
ಹೊಸದಾಗಿ ಸೇರ್ಪಡೆಯಾದ ರಾಜ್ಯ ಕೃಷಿ ಸಚಿವ ಕಾಕನಿ ಗೋವರ್ಧನ್ ರೆಡ್ಡಿ ಅವರಿಗೆ ಸೇರಿದ ಲ್ಯಾಪ್ ಟಾಪ್, ಐಪ್ಯಾಡ್ ಮತ್ತು ಮೂರು ಮೊಬೈಲ್ ಫೋನ್ ಗಳು ಇದ್ದ ಬ್ಯಾಗನ್ನು ಫೋರ್ಜರಿ ಮತ್ತು ಮಾನಹಾನಿ ಪ್ರಕರಣದಲ್ಲಿ ಅವರ ವಿರುದ್ಧ “ಪುರಾವೆಗಳ” ಭಾಗವಾಗಿ ನ್ಯಾಯಾಲಯಕ್ಕೆ ಸಲ್ಲಿಸಲಾಗಿತ್ತು. ಅದರ ಒಂದು ಭಾಗವನ್ನು ನೆಲ್ಲೋರ್ ನ ನಾಲ್ಕನೇ ಹೆಚ್ಚುವರಿ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಿಂದ ಕದಿಯಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಈ ಪ್ರಕರಣದಲ್ಲಿ ಸಚಿವರ ಕೈವಾಡ ಇದೆಯೇ ಎಂದು ಶಂಕಿಸುತ್ತಿದ್ದು ಬಂಧಿತ ಇಬ್ಬರು ವ್ಯಕ್ತಿಗಳನ್ನು ವಿಚಾರಣೆ ನಡೆಸಲಾಗುತ್ತಿದೆ. ಪ್ರಮುಖ ಅಪರಾಧಿಗಳನ್ನು ಶೀಘ್ರದಲ್ಲೇ ಹಿಡಿಯುವ ಭರವಸೆ ನಮಗಿದೆ ಎಂದು ತಿಳಿಸಿದ್ದಾರೆ