ಝೀರೋ ಟ್ರಾಫಿಕ್‌ನಲ್ಲಿ ಕರೆದೊಯ್ದರೂ ಬದುಕದ ಮಗು: ನಿಮ್ಹಾನ್ಸ್ ವೈದ್ಯರ ನಿರ್ಲಕ್ಷ್ಯ ಆರೋಪ

Prasthutha|

ಬೆಂಗಳೂರು: ತಲೆಗೆ ಪೆಟ್ಟಾಗಿದ್ದ ಮಗುವನ್ನು ಹಾಸನ ನಗರದ ಜಿಲ್ಲಾ ಆಸ್ಪತ್ರೆಯಿಂದ ಝೀರೋ ಟ್ರಾಫಿಕ್‌ನಲ್ಲಿ ಬೆಂಗಳೂರಿನ ನಿಮ್ಹಾನ್ಸ್‌ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಆಸ್ಪತ್ರೆ ತಲುಪಿದ ಬಳಿಕ ಮಗು ಮೃತಪಟ್ಟಿದ್ದು, ವೈದ್ಯರು ತ್ವರಿತ ಚಿಕಿತ್ಸೆ ನೀಡದೇ ವಿಳಂಬಿಸಿದ್ದಾರೆ ಎಂದು ಆರೋಪಿಸಲಾಗಿದೆ.

- Advertisement -

ಚಿಕ್ಕಮಗಳೂರು ತಾಲ್ಲೂಕಿನ ಬಸವನಗುಡಿಯ ವೆಂಕಟೇಶ್ -ಜ್ಯೋತಿ ದಂಪತಿಯ ಒಂದೂವರೆ ವರ್ಷದ ಮಗು ವಿಜಯ್ ಮೃತ ಮಗು. ಮಂಗಳವಾರ ಮನೆಯಲ್ಲಿ ಆಟವಾಡುವ ಸಂದರ್ಭದಲ್ಲಿ ಮೆಟ್ಟಿಲಿನಿಂದ ಬಿದ್ದ ವಿಜಯ್ ತಲೆಗೆ ತೀವ್ರ ಪೆಟ್ಟಾಗಿತ್ತು. ಮಗುವನ್ನು ಚಿಕಿತ್ಸೆಗಾಗಿ ಮೊದಲು ಹಾಸನ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದ್ದು,. ತಪಾಸಣೆ ನಡೆಸಿದ ಅಲ್ಲಿ‌ನ ವೈದ್ಯರು ಹೆಚ್ಚಿನ ಚಿಕಿತ್ಸೆಗೆ ಕೂಡಲೇ ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ದಾಖಲಿಸಲು ಸೂಚಿಸಿದ್ದಾರೆ.

ಅದರಂತೆ ಮಗುವನ್ನು ಬೆಂಗಳೂರಿಗೆ ಕರೆದೊಯ್ಯಲು ಪೊಲೀಸರು ಝಿರೋ ಟ್ರಾಫಿಕ್‌ ವ್ಯವಸ್ಥೆ ಮಾಡಿ ಕೊಟ್ಟಿದ್ದರು. ಜೀರೋ ಟ್ರಾಫಿಕ್‌ನಲ್ಲಿ ಮಗುವನ್ನು ಹಾಸನದಿಂದ ನಿಮಾನ್ಸ್‌ಗೆ ಕೇವಲ 1 ಗಂಟೆ 40 ನಿಮಿಷದಲ್ಲಿ ತಲುಪಿಸಲಾಗಿತ್ತು. ಆದರೆ ಬೆಡ್ ಖಾಲಿಯಿಲ್ಲ ಎಂದು ಆಡಳಿತ ಮಂಡಳಿ ಮಗುವನ್ನು ಆಸ್ಪತ್ರೆಯ ಆವರಣದಲ್ಲಿಯೇ ನಿಲ್ಲಿಸಿದೆ. ಮಗುವಿಗೆ ಪ್ರಾಥಮಿಕ ಚಿಕಿತ್ಸೆಯನ್ನೂ ನೀಡದೆ ಬೇಜವಾಬ್ದಾರಿ ತೋರಿದ್ದಲ್ಲದೇ ಸುಮಾರು ಅರ್ಧ ಗಂಟೆಯಿಂದ ಮಗುವನ್ನು ಅಂಬುಲೆನ್ಸ್‌ನಲ್ಲಿಯೇ ಇರಿಸಲಾಗಿತ್ತು.

- Advertisement -

ಸರಿಯಾದ ಸಮಯಕ್ಕೆ ಚಿಕಿತ್ಸೆ ಸಿಗದ ಹಿನ್ನೆಲೆ ಮಗುವಿನ ಆಕ್ಸಿಜನ್ ಲೆವೆಲ್ ಕಡಿಮೆಯಾಗಿ ಮೃತಪಟ್ಟಿದೆ. ಮಗುವಿಗೆ ಚಿಕಿತ್ಸೆ ನೀಡದೆ ವೈದ್ಯರು ನಿರ್ಲಕ್ಷ್ಯ ತೋರಿದ್ದೇ ಮಗುವಿನ ಸಾವಿಗೆ ಕಾರಣ’ ಎಂದು ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Join Whatsapp