ಬಾಬರಿ ಮಸೀದಿ ಧ್ವಂಸ ಪ್ರಕರಣ: ಎಲ್ಲಾ ಅರ್ಜಿಗಳ ವಿಚಾರಣೆ ಮುಕ್ತಾಯಗೊಳಿಸಿದ ಸುಪ್ರೀಂಕೋರ್ಟ್

Prasthutha|

ನವದೆಹಲಿ: ಅಯೋಧ್ಯೆಯಲ್ಲಿ 1992ರಲ್ಲಿ ಬಾಬರಿ ಮಸೀದಿ ಧ್ವಂಸ ಪ್ರಕರಣ ಸಂಬಂಧ ದಾಖಲಾಗಿದ್ದ ಎಲ್ಲಾ ಪ್ರಕರಣಗಳನ್ನು ಸುಪ್ರೀಂಕೋರ್ಟ್ ಮುಕ್ತಾಯಗೊಳಿಸಿದೆ.

- Advertisement -

ಉತ್ತರ ಪ್ರದೇಶ ಸರಕಾರ, ಅದರ ಸಿಬ್ಬಂದಿ ಮತ್ತಿತರರ ವಿರುದ್ಧ ಹೂಡಲಾದ ಎಲ್ಲ ನ್ಯಾಯಾಂಗ ಅರ್ಜಿಗಳನ್ನೂ ಸರ್ವೋಚ್ಚ ನ್ಯಾಯಾಲಯವು ಮಂಗಳವಾರ ಮುಕ್ತಾಯಗೊಳಿಸಿದೆ.

ಅದೇ ವೇಳೆ ಸರ್ವೋಚ್ಚ ನ್ಯಾಯಾಲಯವು 2002ರ ಗುಜರಾತ್ ಗಲಭೆಗೆ ಸಂಬಂಧಿಸಿದ ಎಲ್ಲ ಕಾನೂನು ಪ್ರಕ್ರಿಯೆಗಳನ್ನು ಕೂಡ ನಿಲ್ಲಿಸಿದೆ.

- Advertisement -

2019ರಲ್ಲಿ ಸರ್ವೋಚ್ಚ ನ್ಯಾಯಾಲಯವು ರಾಮ ಜನ್ಮಭೂಮಿ ಪರ ಅಯೋಧ್ಯೆ ಬಾಬರಿ ಮಸೀದಿ ವಿವಾದದಲ್ಲಿ ತೀರ್ಪು ನೀಡಿದ ಬಳಿಕ ಉತ್ತರ ಪ್ರದೇಶ ಸರಕಾರ ಮತ್ತು ಅಲ್ಲಿನ ಸಿಬ್ಬಂದಿ ಮೇಲೆ ಹೂಡಲಾಗಿದ್ದ ನ್ಯಾಯಾಲಯ ನಿಂದನೆ ಪ್ರಕರಣ ಮುಕ್ತಾಯವಾದಂತಾಗಿದೆ.

ನ್ಯಾಯಾಂಗ ನಿಂದನೆ ಅರ್ಜಿಯನ್ನು ಮೊದಲೇ ಪಟ್ಟಿ ಮಾಡಬೇಕಿತ್ತು, ಆದರೆ ಹಿಂದೂಗಳು ಮತ್ತು ಮುಸ್ಲಿಮರ ನಡುವಿನ ಅಯೋಧ್ಯೆ ಭೂ ವಿವಾದವನ್ನು ನಿರ್ಧರಿಸುವ ನವೆಂಬರ್ 9, 2019ರ ತೀರ್ಪಿನೊಂದಿಗೆ ಈ ವಿಷಯವು ಅಸ್ತಿತ್ವ ಕಳೆದುಕೊಂಡಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ಅರ್ಜಿದಾರ ಮುಹಮ್ಮದ್ ಅಸ್ಲಾಮ್ ಭುರೆ 1992ರಲ್ಲಿ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದ್ದರು. ಆದರೆ ಅವರು 2010ರಲ್ಲಿ ನಿಧನರಾದರು. ಅರ್ಜಿದಾರರನ್ನು ಅಮಿಕಸ್ ಕ್ಯೂರಿಯೊಂದಿಗೆ ಬದಲಾಯಿಸುವಂತೆ ವಕೀಲ ಎಂ.ಎಂ.ಕಶ್ಯಪ್ ಅವರು ಕೋರಿದ್ದ ಮನವಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ.

ಅಯೋಧ್ಯೆ ವಿವಾದದ ಅಂತಿಮ ತೀರ್ಪನ್ನು ಸುಪ್ರೀಂಕೋರ್ಟ್ ನವೆಂಬರ್ 9, 2019 ರಂದು ಪ್ರಕಟಿಸಿತ್ತು. ರಾಮ ಮಂದಿರ ನಿರ್ಮಿಸಲು ಟ್ರಸ್ಟ್ ಸ್ಥಾಪಿಸುವಂತೆ ಕೇಂದ್ರಕ್ಕೆ ಸೂಚನೆ ನೀಡಿದ್ದ ಸುಪ್ರೀಂಕೋರ್ಟ್, ಅದೇ ಸಮಯದಲ್ಲಿ ಮಸೀದಿ ನಿರ್ಮಿಸಲು ಪರ್ಯಾಯ ಐದು ಎಕರೆ ಭೂಮಿಯನ್ನು ಮಂಜೂರು ಮಾಡಲು ಆದೇಶಿಸಿತ್ತು.

1992 ರಲ್ಲಿ ಮಸೀದಿಯ ಧ್ವಂಸ ಸುಪ್ರೀಂ ಕೋರ್ಟ್ ಆದೇಶ ಉಲ್ಲಂಘನೆ ಎಂದು ನ್ಯಾಯಾಲಯ ಹೇಳಿತ್ತು. 1949 ರಲ್ಲಿ ವಿಗ್ರಹಗಳನ್ನು ಇಡುವ ಮೂಲಕ ಮಸೀದಿಯನ್ನು ಅಪವಿತ್ರಗೊಳಿಸಿ ಅದನ್ನು ಧ್ವಂಸಗೊಳಿಸುವುದು ಕಾನೂನಿಗೆ ವಿರುದ್ಧವಾಗಿದೆ ಎಂದು ಅದು ತೀರ್ಪಿನಲ್ಲಿ ಹೇಳಿತ್ತಾದರೂ ಮಸೀದಿಯ ಜಾಗವನ್ನು ಮಂದಿರ ನಿರ್ಮಿಸಲು ನೀಡಿ ತೀರ್ಪು ನೀಡಿತ್ತು.



Join Whatsapp