ಹ್ಯಾಟ್ರಿಕ್‌ ಶತಕ: ಬಾಬರ್ ಅಝಮ್ ವಿಶ್ವದಾಖಲೆ

Prasthutha|

ಮುಲ್ತಾನ್‌: ವೃತ್ತಿ ಜೀವನದ ಶ್ರೇಷ್ಠ ಫಾರ್ಮ್‌ನಲ್ಲಿರುವ ಪಾಕಿಸ್ತಾನ ತಂಡದ ನಾಯಕ ಬಾಬರ್ ಅಝಮ್ ಒಂದೇ ಪಂದ್ಯದಲ್ಲಿ ಹಲವು ದಾಖಲೆಗಳನ್ನು ನಿರ್ಮಿಸಿದ್ದಾರೆ. ಮುಲ್ತಾನ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ  ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ ಶತಕ ಸಿಡಿಸುವ ಮೂಲಕ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‌ನಲ್ಲಿ ಯಾರೂ ತಲುಪದ ಶಿಖರವನ್ನು ಅಝಮ್ ಏರಿದ್ದಾರೆ.

- Advertisement -

ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ, ವೆಸ್ಟ್ ಇಂಡೀಸ್ ಪಡೆಯನ್ನು ಅತಿಥೇಯ ಪಾಕಿಸ್ತಾನ 5 ವಿಕೆಟ್‌ಗಳ ಅಂತರದಲ್ಲಿ ಬಗ್ಗುಬಡಿದಿದೆ. ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ್ದ ವೆಸ್ಟ್ ಇಂಡೀಸ್ 8 ವಿಕೆಟ್ ನಷ್ಟದಲ್ಲಿ 305 ರನ್ ಗಳಿಸಿತ್ತು. ಸವಾಲಿ ಗುರಿ ಬೆನ್ನಟ್ಟಿದ ಪಾಕ್ ಪಡೆ ಇನ್ನೂ ನಾಲ್ಕು ಎಸೆತಗಳು ಬಾಕಿ ಇರುವಂತೆಯೇ ಐದು ವಿಕೆಟ್ ನಷ್ಟದಲ್ಲಿ ಗುರಿ ತಲುಪಿತ್ತು. ಐಸಿಸಿ ಏಕದಿನ ಬ್ಯಾಟಿಂಗ್ ಶ್ರೇಯಾಂಕದಲ್ಲಿ ನಂ.1 ಸ್ಥಾನದಲ್ಲಿರುವ ಬಾಬರ್ ಅಝಮ್, ತಮ್ಮ 87ನೇ ಏಕದಿನ ಪಂದ್ಯದಲ್ಲಿ 17ನೇ ಶತಕದ ಸಾಧನೆ ಮಾಡಿದ್ದಾರೆ.

ಮುಲ್ತಾನ್‌ನಲ್ಲಿ 107 ಎಸೆತಗಳನ್ನು ಎದುರಿಸಿದ್ದ ಬಾಬರ್ ಅಝಮ್ 9 ಬೌಂಡರಿಗಳ ನೆರವಿನೊಂದಿಗೆ 103 ರನ್‌ಗಳಿಸಿದರು. ಆ ಮೂಲಕ ಏಕದಿನ ಕ್ರಿಕೆಟ್ ಚರಿತ್ರೆಯಲ್ಲೇ ಎರಡನೇ ಬಾರಿಗೆ ಸತತ ಮೂರು ಶತಕಗಳನ್ನು ಸಿಡಿಸಿದ ಏಕೈಕ ಬ್ಯಾಟ್ಸ್‌ಮನ್‌ ಎನಿಸಿದ್ದಾರೆ. ಇದಕ್ಕೂ ಹಿಂದೆ ಆಸ್ಟ್ರೇಲಿಯಾ ವಿರುದ್ಧ ತವರಿನಲ್ಲಿ ನಡೆದಿದ್ದ ಏಕದಿನ ಸರಣಿಯ ಕೊನೆಯ ಎರಡು ಪಂದ್ಯಗಳಲ್ಲಿ ಪಾಕಿಸ್ತಾನ ನಾಯಕ ಕ್ರಮವಾಗಿ 114 ಮತ್ತು 105* ರನ್‌ಗಳಿಸಿದ್ದರು. ತದನಂತರದಲ್ಲಿ ವೆಸ್ ಇಂಡೀಸ್ ವಿರುದ್ಧವೂ ಶತಕ ದಾಖಲಿಸುವುದರೊಂದಿಗೆ ಹ್ಯಾಟ್ರಿಕ್ ಶತಕವನ್ನು ಪೂರ್ತಿಗೊಳಿಸಿದರು. 

- Advertisement -

ಇದರೊಂದಿಗೆ ಅಝಮ್ ಏಕದಿನ ಕ್ರಿಕೆಟ್‌ನಲ್ಲಿ ಎರಡನೇ ಬಾರಿಗೆ ಹ್ಯಾಟ್ರಿಕ್ ಶತಕದ ಮೈಲಿಗಲ್ಲು ಸ್ಥಾಪಿಸಿದ ಮೊದಲ ಬ್ಯಾಟ್ಸ್‌ಮನ್‌ ಎನಿಸಿಕೊಂಡರು. ಇದಕ್ಕೂ ಮೊದಲು 2016ರಲ್ಲಿ ಯುಎಇಯಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಸತತ ಮೂರು  ಪಂದ್ಯಗಳಲ್ಲಿ ಕ್ರಮವಾಗಿ 120, 123 ಹಾಗೂ 117 ರನ್‌ಗಳನ್ನು ಗಳಿಸುವ ಮೂಲಕ ಮೊದಲ ಬಾರಿಗೆ ಹ್ಯಾಟ್ರಿಕ್ ಶತಕಗಳನ್ನು ಸಿಡಿಸಿದ್ದರು. ಈ ದಾಖಲೆಯನ್ನು ಪಾಕ್ ಆಟಗಾರ ಇದೀಗ ಮತ್ತೊಮ್ಮೆ ಪುನರಾವರ್ತಿಸಿದ್ದಾರೆ. 

13 ಇನ್ನಿಂಗ್ಸ್‌ಗಳಲ್ಲಿ 1000 ರನ್‌ !

ಹ್ಯಾಟ್ರಿಕ್ ಹ್ಯಾಟ್ರಿಕ್ ಶತಕಗಳ ದಾಖಲೆಯ ಜೊತೆಗೆ ಏಕದಿನ ಕ್ರಿಕೆಟ್‌ನಲ್ಲಿ ನಾಯಕನಾಗಿ ಅತಿ ಕಡಿಮೆ ಇನ್ನಿಂಗ್ಸ್‌ಗಳಲ್ಲಿ 1000 ರನ್ ಸಿಡಿಸಿದ ಮೊದಲ ಆಟಗಾರ ಎನಿಸಿಕೊಂಡರು. ಆ ಮೂಲಕ ಟೀಮ್ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ಹೆಸರಿನಲ್ಲಿದ್ದ ದಾಖಲೆಯನ್ನು ಹಿಂದಿಕ್ಕಿದರು. ಕೊಹ್ಲಿ 17 ಇನ್ನಿಂಗ್ಸ್‌ಗಳಲ್ಲಿ 1000 ರನ್ ತಲುಪಿದರೆ, ಬಾಬರ್ ಈ ದಾಖಲೆ ಮುರಿಯಲು 13 ಇನ್ನಿಂಗ್ಸ್‌ಗಳನ್ನಷ್ಟೇ ತೆಗೆದುಕೊಂಡಿದ್ದಾರೆ. ದಕ್ಷಿಣ ಆಫ್ರಿಕಾ ಮಾಜಿ ನಾಯಕ ಎಬಿ ಡಿವಿಲಿಯರ್ಸ್ 20 ಇನಿಂಗ್ಸ್, ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್ 23 ಇನಿಂಗ್ಸ್ ದಾಖಲೆಗಳನ್ನು ಬಾಬರ್ ಬಹುದೂರ ಹಿಂದಿಕ್ಕಿದ್ದಾರೆ. 

ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ ತಂಡದ ಗೆಲುವಿಗೆ ಬಾಬರ್ ಆಝಮ್ ಶತಕದ ಜೊತೆಗೆ ಇಮಾಮ್ ಉಲ್-ಹಕ್(65), ಮೊಹಮ್ಮದ್ ರಿಝ್ವಾನ್(59) ಹಾಗೂ ನಿರ್ಣಾಯಕ ಘಟ್ಟದಲ್ಲಿ ಖುಸ್ದಿಲ್ ಶಾ(41*) ರನ್‌ಗಳ ಉಪಯುಕ್ತ ಕಾಣಿಕೆ ನೀಡಿದ್ದರು. ಮೊದಲು ಬ್ಯಾಟ್ ಮಾಡಿದ್ದ ವೆಸ್ಟ್ ಇಂಡೀಸ್ ಪರ ಶೈ ಹೋಪ್(127) ಶತಕ ಮತ್ತು ಮಧ್ಯಮ ಕ್ರಮಾಂಕದಲ್ಲಿ ಶಮರಹ್ ಬ್ರೂಕ್ಸ್ (71) ಅರ್ಧಶತಕ ಸಿಡಿಸಿದ್ದರು. ಪಂದ್ಯದ ಬಳಿಕ ತಮಗೆ ದೊರೆತ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಪಾಕ್‌ ನಾಯಕ ಅಝಮ್‌, ಖುಸ್ದಿಲ್ ಶಾ ಅವರಿಗೆ ನೀಡುವ ಮೂಲಕ ಮಾದರಿಯಾದರು. 



Join Whatsapp