ಬೆಂಗಳೂರು : ಕಳೆದ ನವೆಂಬರ್ 25ರಿಂದ ದತ್ತ ಪಾದುಕೆಗಳ ದರ್ಶನಕ್ಕೆ ಅವಕಾಶ ಮಾಡಿಕೊಡುವ ಉದ್ದೇಶದಿಂದ ಸಂಘಪರಿವಾರದ ಒತ್ತಡಕ್ಕೆ ಮಣಿದು 900 ವರ್ಷಗಳ ಸುದೀರ್ಘ ಇತಿಹಾಸ ಹೊಂದಿರುವ ಬಾಬಾಬುಡನ್ ಗಿರಿ ಮಸೀದಿಯ ಮೈಕ್ ಅನ್ನು ತೆರವುಗೊಳಿಸಿರುವುದು ಖಂಡನೀಯ ಎಂದು ಎಸ್ ಡಿಪಿಐ ರಾಜ್ಯ ಪ್ರಧಾನ ಕಾರ್ಯದರ್ಶಿ ಅಪ್ಸರ್ ಕೂಡ್ಲಿಪೇಟೆ ಹೇಳಿದ್ದಾರೆ.
ಜಿಲ್ಲಾಡಳಿತ ತಕ್ಷಣವೇ ಈ ಬಗ್ಗೆ ಕ್ರಮ ಕೈಗೊಂಡು, ತಾತ್ಕಾಲಿಕವಾಗಿ ತೆರವು ಗೊಳಿಸಿರುವ ಮೈಕ್ ಅನ್ನು ಪುನಃ ಅಳವಡಿಸಬೇಕೆಂದು ಅವರು ಆಗ್ರಹಿಸಿದ್ದಾರೆ.
ನ.25ರಂದು ಸಂಘಪರಿವಾರ ಪ್ರಾಯೋಜಿತ ದತ್ತಮಾಲೆ ಅಭಿಯಾನ ಆಚರಿಸಲು ಅವಕಾಶ ಮಾಡಿಕೊಡುವ ಮೂಲಕ, ಜಿಲ್ಲಾಡಳಿತ ಬಾಬಾಬುಡನ್ ಗಿರಿಯಲ್ಲಿ 1975ರ ಹಿಂದೆ ಇದ್ದಂತಹ ಧಾರ್ಮಿಕ ವಿಧಿ ವಿಧಾನಗಳನ್ನು ಹೊರತುಪಡಿಸಿ ಯಾವುದೇ ಹೊಸ ಆಚರಣೆಗಳಿಗೆ ಅವಕಾಶ ನೀಡಬಾರದು ಎಂಬ ಸುಪ್ರೀಂಕೋರ್ಟ್ ಆದೇಶದ ಸ್ಪಷ್ಟ ಉಲ್ಲಂಘನೆಯಾಗಿದೆ.
ಎಸ್ಡಿಪಿಐ ರಾಜ್ಯ ಉಪಾಧ್ಯಕ್ಷರಾದ ಅಡ್ವೊಕೇಟ್ ಅಬ್ದುಲ್ ಮಜೀದ್ ಖಾನ್, ರಾಜ್ಯ ಪ್ರಧಾನ ಕಾರ್ಯದರ್ಶಿ ಅಪ್ಸರ್ ಕೂಡ್ಲಿಪೇಟೆ ರವರ ನೇತೃತ್ವದಲ್ಲಿ ಬಾಬಾಬುಡನ್ ಗಿರಿ ದರ್ಗಾದ ಮಸೀದಿಗೆ ಭೇಟಿ ನೀಡಿ ಅಲ್ಲಿನ ಸಜ್ಜಾದ್ ನಶೀನ್ ರವರೊಂದಿಗೆ ಮಾಹಿತಿ ಪಡೆದ ಎಸ್ಡಿಪಿಐ ನಿಯೋಗ ರಾಜ್ಯ ಮತ್ತು ನೆರೆ ರಾಜ್ಯಗಳ ಹಿಂದೂ ಮತ್ತು ಮುಸ್ಲಿಂ ಧರ್ಮದ ಭಕ್ತರು ಸಾವಿರಾರು ಸಂಖ್ಯೆಯಲ್ಲಿ ದಿನಂಪ್ರತಿ ಆಗಮಿಸಿ ಸೂಫಿ ಸಂತರ ಆಶೀರ್ವಾದ ಪಡೆಯುವ ಪ್ರತೀತಿ ಕಳೆದ 900 ವರ್ಷಗಳಿಂದ ನಡೆದುಕೊಂಡು ಬಂದಿದೆ. ಆದರೆ ಸಂಘಪರಿವಾರ ಪ್ರಾಯೋಜಿತ ದತ್ತಮಾಲೆ ಎಂಬ ನೂತನ ಆಚರಣೆ ದಿನದಂದು ಗಿರಿಯಲ್ಲಿ ಭಯದ ವಾತಾವರಣ ಸೃಷ್ಟಿಸಿ ಬೇರೆ ಧರ್ಮದ ಭಕ್ತಾದಿಗಳಿಗೆ ಬಾಬಾಬುಡನ್ ಗಿರಿಗೆ ಪ್ರವೇಶ ನಿರಾಕರಣೆ ಮಾಡುವುದನ್ನು ಎಸ್ಡಿಪಿಐ ಖಂಡಿಸುತ್ತದೆ ಎಂದು ಎಸ್ಡಿಪಿಐ ರಾಜ್ಯ ಪ್ರಧಾನ ಕಾರ್ಯದರ್ಶಿ ಅಪ್ಸರ್ ಕೂಡ್ಲಿಪೇಟೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.