ಈಶ್ವರಪ್ಪ ವಿರುದ್ಧ ಬಿ ರಿಪೋರ್ಟ್; ಸರ್ಕಾರದ ಮರ್ಯಾದೆ ಉಳಿಸಿಕೊಳ್ಳುವ ಕುತಂತ್ರ: ಡಿ.ಕೆ. ಶಿವಕುಮಾರ್ ಆರೋಪ

Prasthutha|

- Advertisement -

ಈ ಸರ್ಕಾರ ತಮ್ಮ ನಾಯಕರ ಲಂಚ ಹಾಗೂ ಮಂಚದ ಪ್ರಕರಣ ಮುಚ್ಚಿಹಾಕುತ್ತಿದ್ದು, ಬಿಜೆಪಿ ಕಾರ್ಯಕರ್ತನಿಗೆ ನ್ಯಾಯ ಸಿಗುತ್ತಿಲ್ಲ. ಜನ ಸಾಮಾನ್ಯರಿಗೂ ನ್ಯಾಯ ಸಿಗುವುದಿಲ್ಲ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ತಿಳಿಸಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಬುಧವಾರ ಉತ್ತರಿಸಿದ ಅವರು ಹೇಳಿದ್ದಿಷ್ಟು;

- Advertisement -

‘ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದ ತನಿಖೆ ಸಂದರ್ಭದಲ್ಲಿ ಮುಖ್ಯಮಂತ್ರಿಗಳು, ಯಡಿಯೂರಪ್ಪನವರು, ಗೃಹ ಸಚಿವರು ಈಶ್ವರಪ್ಪ ಅವರು ನಿರ್ದೋಷಿಯಾಗಿ ಹೊರಬರಲಿದ್ದಾರೆ ಎಂದು ಪ್ರಮಾಣಪತ್ರ ನೀಡಿದ್ದರು.

ತನಿಖೆ ನಡೆಯುವ ಮುನ್ನವೇ ಅವರ ತಪ್ಪಿಲ್ಲ ಎಂದು ಸರ್ಕಾರ ಹೇಳಿದರೆ, ತನಿಖಾಧಿಕಾರಿಗಳ ಮೇಲೆ ಒತ್ತಡ ಇರುತ್ತದೆ. ಸರ್ಕಾರಡ ಮರ್ಯಾದೆ ಕಾಪಾಡಿಕೊಳ್ಳಲು ಇಂದು ಬಿ ರಿಪೋರ್ಟ್ ಸಲ್ಲಿಸಲಾಗಿದೆ. ಈ ಪ್ರಕರಣದ ಸತ್ಯಾಂಶ ಎಲ್ಲರಿಗೂ ಗೊತ್ತಿದೆ.

ಸಚಿವರಾದ ಗೋವಿಂದ ಕಾರಜೋಳ, ರಮೇಶ್ ಜಾರಕಿಹೊಳಿ, ಮುರುಗೇಶ್ ನಿರಾಣಿ ಅವರು ಸಂತೋಷ್ ಪಾಟೀಲ್ ಕಾಮಗಾರಿ ಪೂರ್ಣಗೊಳಿಸಿದ್ದಾನೆ ಎಂದು ಹೇಳಿಕೆ ನೀಡಿದ್ದರು. ಆತ ಪ್ರಧಾನಮಂತ್ರಿಗಳು, ಪಕ್ಷದ ನಾಯಕರಿಗೆ ಪತ್ರ ಬರೆದು ತನ್ನ ಸಮಸ್ಯೆ ಹೇಳಿಕೊಂಡ. ಇತೀಚೆಗೆ ಮೃತ ಸಂತೋಷ್ ಪಾಟೀಲ್ ಪತ್ನಿ ಕೂಡ ರಾಜ್ಯಪಾಲರಿಗೆ ಪತ್ರ ಬರೆದಿದ್ದಾರೆ. ಆದರೂ ಸರ್ಕಾರ ಇವರಿಗೆ ನ್ಯಾಯ ಒದಗಿಸಲು ಸಾಧ್ಯವಾಗಿಲ್ಲ.

ನಾವು ಈ ಬಗ್ಗೆ ಹೋರಾಟ ಮಾಡಿದಾಗ ಕಣ್ಣೊರೆಸಲು ರಾಜೀನಾಮೆ ನೀಡಿದ್ದರು. ಸಂತೋಷ್ ಪಾಟೀಲ್ ಬಿಜೆಪಿ ಕಾರ್ಯಕರ್ತನಾಗಿದ್ದರು, ಈ ಪ್ರಕರಣ ಮುಚ್ಚಿಹಾಕುತ್ತಿರುವ ಬಿಜೆಪಿ ಸರ್ಕಾರಕ್ಕೆ ನಾಚಿಕೆ ಆಗಬೇಕು.

ಅವರು ಯಾವುದೇ ಬಿ ರಿಪೋರ್ಟ್ ಕೊಟ್ಟರು ಇದು 40% ಕಮಿಷನ್ ಸರ್ಕಾರ ಎಂದು ರಾಜ್ಯದ ಜನರಿಗೆ ಗೊತ್ತಿದೆ. ಈ ಬಗ್ಗೆ ಅವರದೇ ಪಕ್ಷದ ನಾಯಕರು ಹೇಳಿದ್ದಾರೆ. ಸರ್ಕಾರಿ ಇಲಾಖೆಗಳಲ್ಲಿ ಹುದ್ದೆಗೆ ದರ ನಿಗದಿಯಾಗಿರುವ ವರದಿ ಮಾಧ್ಯಮಗಳಲ್ಲಿ ಬಂದಿವೆ. ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣನವರು ಪ್ರಧಾನಿಗೆ ಪತ್ರ ಬರೆದಿರುವುದು ಎಲ್ಲರಿಗೂ ಗೊತ್ತಿದೆ.

ಈ 40% ಕಮಿಷನ್ ಸರ್ಕಾರವನ್ನು ಜನ ಯಾವುದೇ ಕಾರಣಕ್ಕೂ ಕ್ಷಮಿಸುವುದಿಲ್ಲ.’

ಬಿಜೆಪಿ ಕಾರ್ಯಕರ್ತನಿಗೆ ನ್ಯಾಯ ಸಿಗದಿದ್ದರೆ ಜನ ಸಾಮಾನ್ಯರಿಗೆ ನ್ಯಾಯ ಸಿಗುವುದೇ ಎಂಬ ಮಾಧ್ಯಮಗಳ ಪ್ರಶ್ನೆಗೆ, ‘ ಖಂಡಿತವಾಗಿಯೂ ಜನಸಾಮಾನ್ಯರಿಗೆ ನ್ಯಾಯ ಸಿಗುವುದಿಲ್ಲ. ಸ್ವಾಮೀಜಿಗಳು, ಯತ್ನಾಳ್ ಅವರು, ವಿಶ್ವನಾಥ್ ಅವರು 40% ಕಮಿಷನ್ ವಿಚಾರವಾಗಿ ಹೇಳಿಕೆ ನೀಡಿದ್ದಾರೆ. ಅವರನ್ನು ಕರೆಸಿ ವಿಚಾರಣೆ ಮಾಡಿ ಯಾವ ಮಾಹಿತಿ ಇದೆ ಎಂದು ಕೇಳಬಹುದಿತ್ತಲ್ಲವೇ. ನಮ್ಮ ನಾಯಕರಾದ ಪ್ರಿಯಾಂಕ್ ಖರ್ಗೆ ಅವರಿಗೆ ನೊಟೀಸ್ ಕೊಟ್ಟಂತೆ ಅವರಿಗೂ ನೀಡಬಹುದಿತ್ತಲ್ಲವೆ. ಅವರು ತಮ್ಮ ನಾಯಕರ ಲಂಚ ಮಂಚದ ಪ್ರಕರಣವನ್ನು ಮುಚ್ಚಿಹಾಕುತ್ತಿದ್ದಾರೆ’ ಎಂದು ತಿಳಿಸಿದರು.

ನಾಳೆ ಪ್ರತಿಭಟನೆ ಬಗ್ಗೆ ಕೇಳಿದ ಪ್ರಶ್ನೆಗೆ, ‘ ಸೋನಿಯಾ ಗಾಂಧಿ ಅವರಿಗೆ ಕಿರುಕುಳ ನೀಡುತ್ತಿರುವುದರ ವಿರುದ್ಧ ಸಂದೇಶ ರವಾನೆ ಮಾಡಲು ಪ್ರತಿಭಟನೆ ಹಮ್ಮಿಕೊಂಡಿದ್ದು, ನಾವೆಲ್ಲರೂ ನಮ್ಮ ಅಧ್ಯಕ್ಷರಿಗೆ ಧೈರ್ಯ ತುಂಬುವ ಕೆಲಸ ಮಾಡಬೇಕು. ನಮ್ಮ ಬಂಧನವಾದರೂ ಸರಿಯೇ, ಅಧಿಕಾರ ದುರುಪಯೋಗ ಮಾಡುವ ಬಿಜೆಪಿ ಸರ್ಕಾರದ ನಿಲುವು ಖಂಡಿಸಲು ಸ್ವಾತಂತ್ರ್ಯ ಉದ್ಯಾನವನದಲ್ಲಿ ಎಲ್ಲಾ ಶಾಸಕರು ಸೇರಿ ಹೋರಾಟ ಮಾಡುತ್ತೇವೆ’ ಎಂದು ಹೇಳಿದರು.



Join Whatsapp