ಬೆಂಗಳೂರು: ಧ್ವನಿವರ್ಧಕಗಳಲ್ಲಿ ಅಜಾನ್ ಕರೆ ನೀಡುವುದು ಇತರ ಧರ್ಮಗಳ ಜನರ ಮೂಲಭೂತ ಹಕ್ಕನ್ನು ಉಲ್ಲಂಘಿಸುವುದಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಸ್ಪಷ್ಟಪಡಿಸಿದೆ ಮತ್ತು ಧ್ವನಿವರ್ಧಕಗಳಲ್ಲಿ ಅಜಾನ್ ಮೊಳಗುವುದನ್ನು ನಿಲ್ಲಿಸುವಂತೆ ಮಸೀದಿಗಳಿಗೆ ಆದೇಶಿಸಲು ಕೋರಿದ್ದ ಅರ್ಜಿಯನ್ನು ನ್ಯಾಯಾಲಯ ನಿರಾಕರಿಸಿದೆ.
ಬೆಂಗಳೂರು ನಿವಾಸಿ ಮಂಜುನಾಥ್ ಎಸ್.ಹಾಲವಾರ್, ಆಝಾನ್ ಗೆ ಧ್ವನಿವರ್ಧಕ ನಿಷೇಧಿಸಲು ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್) ಅಡಿಯಲ್ಲಿ ಅರ್ಜಿ ಸಲ್ಲಿಸಿದ್ದರು. ಅಝಾನ್, ಮುಸ್ಲಿಮರ ಅತ್ಯಗತ್ಯ ಧಾರ್ಮಿಕ ಆಚರಣೆಯಾಗಿದೆ, ಆದಾಗ್ಯೂ ಅಜಾನ್ ನ ವಿಷಯಗಳು ರಾಜ್ಯದ ಇತರ ಧಾರ್ಮಿಕ ವಿಶ್ವಾಸಿಗಳನ್ನು ನೋಯಿಸುತ್ತಿವೆ ಎಂದು ಅರ್ಜಿಯಲ್ಲಿ ತಿಳಿಸಿದ್ದರು.
ಅರ್ಜಿಯನ್ನು ವಿಚಾರಣೆ ನಡೆಸಿದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಅಲೋಕ್ ಅರಾಧೆ ನೇತೃತ್ವದ ವಿಭಾಗೀಯ ಪೀಠವು, ಸಂವಿಧಾನದ 25 (1) ಅನುಚ್ಛೇದವು, ವ್ಯಕ್ತಿಗಳು ತಮ್ಮ ಧರ್ಮವನ್ನು ಮುಕ್ತವಾಗಿ ಪ್ರತಿಪಾದಿಸಲು, ಆಚರಿಸಲು ಮತ್ತು ಪ್ರಚಾರ ಮಾಡಲು ಮೂಲಭೂತ ಹಕ್ಕುಗಳನ್ನು ನೀಡುತ್ತದೆ. ಅಜಾನ್ ನಲ್ಲಿರುವ ವಿಷಯಗಳು ಅರ್ಜಿದಾರರ ಅಥವಾ ಇತರ ಧರ್ಮದ ವ್ಯಕ್ತಿಗಳ ಮೂಲಭೂತ ಹಕ್ಕನ್ನು ಉಲ್ಲಂಘಿಸುತ್ತವೆ ಎಂಬ ವಾದವನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಪ್ರತಿಪಾದಿಸಿದೆ.
ಶಬ್ದ ಮಾಲಿನ್ಯ ಮತ್ತು ಧ್ವನಿವರ್ಧಕಗಳನ್ನು ಬಳಸುವುದನ್ನು ನಿರ್ಬಂಧಿಸುವ ಬಗ್ಗೆ ನಿಯಮಗಳನ್ನು ಜಾರಿಗೆ ತರುವಂತೆ ಅಧಿಕಾರಿಗಳಿಗೆ ನ್ಯಾಯಾಲಯವು ನಿರ್ದೇಶನ ನೀಡುವುದರ ಜೊತೆಗೆ, ಧ್ವನಿವರ್ಧಕಗಳಲ್ಲಿ ಅಜಾನ್ ಕರೆ ನೀಡುವುದು ಇತರ ಧರ್ಮದ ಜನರ ಮೂಲಭೂತ ಹಕ್ಕನ್ನು ಉಲ್ಲಂಘಿಸಿದಂತೆ ಆಗುವುದಿಲ್ಲ ಮತ್ತು ಧ್ವನಿವರ್ಧಕಗಳಲ್ಲಿ ಅಜಾನ್ ಮೊಳಗುವುದನ್ನು ನಿಲ್ಲಿಸುವಂತೆ ಮಸೀದಿಗಳಿಗೆ ಆದೇಶಿಸಲು ಕೋರಿದ್ದ ಅರ್ಜಿಯನ್ನು ಸ್ವೀಕರಿಸಲು ಸಾಧ್ಯವಿಲ್ಲ ಎಂದು ಹೇಳಿದೆ