ಎವಿಜಿಸಿ ಕಾರ್ಯನೀತಿ ರೂಪಿಸಲು ಸಮಿತಿ ರಚನೆ: ಅಶ್ವತ್ಥ ನಾರಾಯಣ

Prasthutha|

ಬೆಂಗಳೂರು: ದಿನೇ ದಿನೇ ಹೆಚ್ಚು ಬೇಡಿಕೆಯ ಕ್ಷೇತ್ರವಾಗುತ್ತಿರುವ ಅನಿಮೇಷನ್, ವಿಶುಯಲ್ ಎಫೆಕ್ಟ್ಸ್, ಗೇಮಿಂಗ್ ಮತ್ತು ಕಾಮಿಕ್ಸ್ ಗೆ ಸಂಬಂಧಿಸಿದಂತೆ ಹೊಸ ಎವಿಜಿಸಿ ಕಾರ್ಯನೀತಿಯನ್ನು ರೂಪಿಸಲು ಸದ್ಯವೇ ಸಮಿತಿಯನ್ನು ರಚಿಸಲಾಗುವುದು ಎಂದು ಐಟಿ ಮತ್ತು ಬಿಟಿ ಸಚಿವ ಡಾ.ಸಿ ಎನ್ ಅಶ್ವತ್ಥ ನಾರಾಯಣ ಹೇಳಿದ್ದಾರೆ.

- Advertisement -


ಗುರುವಾರ ಇಲ್ಲಿ ನಡೆದ ‘ಜಿಎಎಫ್ಎಕ್ಸ್ ಸ್ಪರ್ಧಾ ಕಾರ್ಯಕ್ರಮ’ದಲ್ಲಿ ಮಾತನಾಡಿದ ಅವರು, ರಾಜ್ಯದ ಡಿಪ್ಲೊಮಾ ಶಿಕ್ಷಣದಲ್ಲಿ ಈಗಾಗಲೇ ಅನಿಮೇಷನ್ ಮತ್ತು ಗೇಮಿಂಗ್ ಕಲಿಕೆಯ ಕೋರ್ಸನ್ನು ಅಳವಡಿಸಿ ಕೊಳ್ಳಲಾಗಿದೆ. ಅದೇ ರೀತಿ ಎಂಜಿನಿಯರಿಂಗ್ ಶಿಕ್ಷಣದ ಪಠ್ಯಕ್ರಮಕ್ಕೆ ಕೂಡ ಇಂತಹ ಅಂಶಗಳನ್ನು ಗಮನದಲ್ಲಿರಿಸಿಕೊಂಡು ಪೂರ್ಣವಾಗಿ ಪರಿಷ್ಕರಿಸಿ, ಹೊಸ ರೂಪ ನೀಡಲಾಗಿದೆ ಎಂದರು.


ಎನ್ಇಪಿಯಲ್ಲಿ ಎವಿಜಿಸಿ ತರಹದ ಅತ್ಯಾಧುನಿಕ ಜ್ಞಾನಧಾರೆಗಳ ಕಲಿಕೆಗೆ ಒತ್ತು ಕೊಡಲಾಗಿದೆ. ನಾವು ಸಮಯವನ್ನು ವ್ಯರ್ಥ ಮಾಡದೆ, ಉದ್ಯಮದ ಬೇಡಿಕೆಗೆ ತಕ್ಕಂತೆ ಕಲಿಕೆಯನ್ನು ಸಾಧ್ಯವಾಗಿಸಬೇಕು. ಇದರಿಂದ ಅವಕಾಶಗಳ ಲಾಭ ರಾಜ್ಯದ ಯುವಜನರಿಗೆ ಸಿಗಲಿದೆ ಎಂದು ಅಭಿಪ್ರಾಯಪಟ್ಟರು.

- Advertisement -


ರಾಜ್ಯದಲ್ಲಿ ಸಿನಿಮಾ, ಮನೋರಂಜನೆ ಮತ್ತು ಮಾಧ್ಯಮ ಕ್ಷೇತ್ರಗಳು ಅಗಾಧವಾಗಿ ಬೆಳೆಯುತ್ತಿವೆ. ಅದೇ ರೀತಿ ಶಿಕ್ಷಣ ಹಾಗೂ ಕಲಿಕಾ ಕ್ಷೇತ್ರಗಳು ಕೂಡ ಏಕತಾನತೆಯಿಂದ ಹೊರಬರಲು ಆನಿಮೇಷನ್, ವಿಷುಯಲ್ ಎಫೆಕ್ಟ್ ಗಳು ಸಹಕಾರಿಯಾಗಲಿವೆ. ಇಂತಹ ಕಂಟೆಟ್ ಗಳಿಗೆ ಪೂರೈಸಲಾಗದಷ್ಟು ಬೇಡಿಕೆ ಇದೆ. ಸದ್ಯದಲ್ಲೇ ಬರಲಿರುವ ಎವಿಜಿಸಿ ಕಾರ್ಯನೀತಿಯು ಈ ಅವಕಾಶಗಳ ಸದುಪಯೋಗಕ್ಕೆ ಒತ್ತು ಕೊಡಲಿದೆ ಎಂದು ಅವರು ವಿವರಿಸಿದರು.
ಕಾರ್ಯಕ್ರಮದಲ್ಲಿ ಐಟಿ-ಬಿಟಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಇ.ವಿ.ರಮಣ ರೆಡ್ಡಿ, ನಿರ್ದೇಶಕಿ ಮೀನಾ ನಾಗರಾಜ್, ಕೆಡಿಇಎಂ ಸಿಇಒ ಸಂಜೀವ್ ಗುಪ್ತ ಅವರು ಇದ್ದರು.



Join Whatsapp