ಕಳೆದ ವರ್ಷ ದೇಶದಲ್ಲಿ ಪ್ರತಿನಿತ್ಯ ಸರಾಸರಿ 77 ಅತ್ಯಾಚಾರ ಪ್ರಕರಣ: ಆಘಾತಕಾರಿ ಅಂಕಿಅಂಶ ಬಹಿರಂಗಪಡಿಸಿದ ಎನ್.ಸಿ.ಆರ್.ಬಿ

Prasthutha|

ನವದೆಹಲಿ: ಕಳೆದ ವರ್ಷ ಭಾರತದೆಲ್ಲೆಡೆ ಪ್ರತಿನಿತ್ಯ ಸರಾಸರಿ 77 ಅತ್ಯಾಚಾರ ಪ್ರಕರಣಗಳು ವರದಿಯಾಗಿವೆ. ಆ ವರ್ಷದಲ್ಲಿ ಒಟ್ಟು 28,046 ಅತ್ಯಾಚಾರ ಘಟನೆಗಳು ನಡೆದಿವೆ ಎಂದು ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (ಎನ್.ಸಿ.ಆರ್.ಬಿ) ಬಿಡುಗಡೆ ಮಾಡಿರುವ ವರದಿಯಲ್ಲಿ ತಿಳಿಸಿದೆ.

- Advertisement -

ಒಟ್ಟಾರೆಯಾಗಿ ಕಳೆದ ವರ್ಷ ದೇಶಾದ್ಯಂತ 3,71,503 ಮಹಿಳೆಯರ ಮೇಲಿನ ಅಪರಾಧ ಪ್ರಕರಣಗಳು ವರದಿಯಾಗಿವೆ. ಅದೇ ರೀತಿ 2019 ರಲ್ಲಿ 4,05,326 ಮತ್ತು 2018 ರಲ್ಲಿ 3,78,236 ಕ್ಕೆ ಇಳಿದಿದೆ ಎಂದು ಕೇಂದ್ರ ಗೃಹ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ NCRB, ತನ್ನ ವರದಿಯಲ್ಲಿ ತಿಳಿಸಿದೆ.

2020 ರಲ್ಲಿ ಮಹಿಳೆಯರ ವಿರುದ್ಧದ ಅಪರಾಧಗಳ ಒಟ್ಟು 28,153 ಪ್ರಕರಣಗಳ ಪೈಕಿ 28, 046 ಮಹಿಳೆಯರು ಅತ್ಯಾಚಾರಕ್ಕೊಳಗಾಗಿದ್ದಾರೆಂದು NCRB ಅಂಕಿ ಅಂಶಗಳು ಬಹಿರಂಗ ಪಡಿಸಿದೆ. ಈ ಎಲ್ಲಾ ಪ್ರಕರಣಗಳು ಕೋವಿಡ್ ಸಾಂಕ್ರಾಮಿಕ ಪ್ರೇರಿತ ಲಾಕ್ ಡೌನ್ ಮಧ್ಯೆ ನಡೆದಿರುವುದು ವಿಪರ್ಯಾಸ. ಸಂತ್ರಸ್ತೆಯರ ಪೈಕಿ 25,498 ವಯಸ್ಕರು ಮತ್ತು 2655 ಮಂದಿ 18 ವರ್ಷಕ್ಕಿಂತ ಕೆಳಗಿನವರು ಎಂದು ತಿಳಿದು ಬಂದಿದೆ.

- Advertisement -

ಭಾರತೀಯ ದಂಡ ಸಂಹಿತೆ ಸೆಕ್ಷನ್ 376 ರ ಅನ್ವಯ ಅತ್ಯಾಚಾರ ಪ್ರಕರಣದ ಪೈಕಿ 2019 ರಲ್ಲಿ 32,033, 2018 ರಲ್ಲಿ 33,356, 2017 ರಲ್ಲಿ 32,559, 2016 ರಲ್ಲಿ ಅಂಕಿ ಅಂಶವು 38,947 ದಾಖಲಾಗಿದೆ ಎಂದು NCRB ವರದಿ ತಿಳಿಸಿದೆ.
ಇನ್ನು ರಾಜ್ಯವಾರು ಅಪರಾಧದ ಕಡೆಗೆ ಗಮನ ಹರಿಸುವುದಾದರೆ 2020 ರಲ್ಲಿ ರಾಜಸ್ಥಾನದಲ್ಲಿ 5310, ಉತ್ತರ ಪ್ರದೇಶ 2339, ಮಹಾರಾಷ್ಟ್ರ 2061, ದೆಹಲಿ 997 ಮತ್ತು ಅಸ್ಸಾಮ್ 1657 ಪ್ರಕರಣಗಳು ಪತ್ತೆಯಾಗಿವೆ.

ಕಳೆದ ವರ್ಷ ಮಹಿಳೆಯರ ವಿರುದ್ಧದ ಅಪರಾಧಗಳಲ್ಲಿ ಗರಿಷ್ಠ 1,11,549 ಪತಿ ಅಥವಾ ಸಂಬಂಧಿಕರಿಂದ ಕ್ರೌರ್ಯದಿಂದ ನಡೆದಿರುವುದು ಜನರನ್ನು ಕಂಗೆಡಿಸಿದೆ. ಮಾತ್ರವಲ್ಲ 62,300 ಅಪಹರಣ ಪ್ರಕರಣಗಳು ಒಳಗೊಂಡಿವೆ. ಅತ್ಯಾಚಾರದ ಜೊತೆಗೆ 85, 392 ಪ್ರಕರಣಗಳು ಹಲ್ಲೆ ಮತ್ತು ಅತಿರೇಕದ ವರ್ತನೆ ಪ್ರಕರಣ ದಾಖಲಾಗಿದೆ. 2020 ರಲ್ಲಿ ದೇಶಾದ್ಯಂತ 105 ಆಸಿಡ್ ದಾಳಿ ಪ್ರಕರಣ ವರದಿಯಾಗಿದೆ.

ಇನ್ನು ವರದಕ್ಷಿಣೆ ಹಿಂಸೆ ಮತ್ತು ಸಾವಿನ ಪ್ರಕರಣದಲ್ಲಿ ಭಾರತದಲ್ಲಿ 6966 ಪ್ರಕರಣಗಳು ದಾಖಲಾಗಿದ್ದು, ಕಳೆದ ವರ್ಷ 7.045 ಬಲಿಪಶುಗಳಿದ್ದಾರೆಂದು ವರದಿಯಲ್ಲಿ ಉಲ್ಲೇಖಿಸಿದೆ.

ಕೇಂದ್ರ ಗೃಹ ಸಚಿವಾಲಯದ ಅಧೀನದಲ್ಲಿರುವ ಎನ್.ಸಿ.ಆರ್.ಬಿಯು, ಐಪಿಸಿ ಸೆಕ್ಷನ್ ಮತ್ತು ದೇಶದಲ್ಲಿರುವ ವಿಶೇಷ, ಸ್ಥಳೀಯ ಕಾನೂನುಗಳ ಅಡಿಯಲ್ಲಿ ಅಪರಾಧ ಪ್ರಕರಣಗಳ ವರದಿಯನ್ನು ಸಂಗ್ರಹಿಸುವ ಮತ್ತು ವಿಶ್ಲೇಷಿಸುವ ಜವಾಬ್ದಾರಿಯನ್ನು ಹೊಂದಿದೆ.

Join Whatsapp