ನವದೆಹಲಿ: ಸಿಖ್ಖರ ಮೇಲೆ ಹಲ್ಲೆ ನಡೆಸಿದ ಕೇಸ್ ನಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿದ್ದ ಭಾರತೀಯ ಮೂಲದ ವ್ಯಕ್ತಿಯನ್ನು ಗಡಿಪಾರು ಮಾಡಿರುವುದಾಗಿ ಆಸ್ಟ್ರೇಲಿಯಾದ ವಲಸೆ, ಪೌರತ್ವ ಮತ್ತು ಬಹುಸಂಸ್ಕೃತಿ ವ್ಯವಹಾರಗಳ ಸಚಿವ ಅಲೆಕ್ಸ್ ಹಾಕ್ ಹೇಳಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿದ ಅವರು, ಆಸ್ಟ್ರೇಲಿಯಾದ ಸಾಮಾಜಿಕ ಒಗ್ಗಟ್ಟನ್ನು ಹಾಳು ಮಾಡುವ ಪ್ರಯತ್ನಗಳನ್ನು ಸಹಿಸಲಾಗುವುದಿಲ್ಲ. ಆತ ಜೈಲಿನಿಂದ ಬಿಡುಗಡೆಯಾದ ನಂತರ ಭಾರತಕ್ಕೆ ಇರುವ ಮೊದಲ ವಿಮಾನದಲ್ಲಿ ಆಸ್ಟ್ರೇಲಿಯಾದಿಂದ ಗಡಿಪಾರು ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಹರಿಯಾಣ ರಾಜ್ಯದ ವಿಶಾಲ್ ಜೂದ್ ವ್ಯಾಸಂಗಕ್ಕಾಗಿ ಆಸ್ಟ್ರೇಲಿಯಾಕ್ಕೆ ತೆರಳಿದ್ದನು. ಆದರೆ ಆತ 2020ರ ಸೆಪ್ಟಂಬರ್ ಮತ್ತು 2021ರ ಫೆಬ್ರವರಿಯಲ್ಲಿ ಸಿಖ್ಖರ ಮೇಲೆ ಹಲ್ಲೆ ನಡೆಸಿದ್ದಕ್ಕಾಗಿ ತಪ್ಪಿತಸ್ಥನೆಂದು ಘೋಷಿಸಲಾಗಿತ್ತು. ಅದಕ್ಕಾಗಿ ಆತನಿಗೆ ಒಂದು ವರ್ಷದ ಜೈಲು ಶಿಕ್ಷೆ ಸಹ ವಿಧಿಸಲಾಗಿತ್ತು.
ಪ್ರಕರಣದ ಬಗ್ಗೆ ಹರಿಯಾಣದ ಮುಖ್ಯಮಂತ್ರಿ ಮನೋಹರ್ ಲಾಲ್ ಕಟ್ಟರ್ ರವರು ಕೈಬಿಡುವಂತೆ ಆಸ್ಟ್ರೇಲಿಯಾ ಸರ್ಕಾರಕ್ಕೆ ಒತ್ತಾಯಿಸಿದ್ದರು. 7 ಪ್ರಕರಣಗಳನ್ನು ಕೈಬಿಟ್ಟ ಆಸ್ಟ್ರೇಲಿಯಾ ಸರ್ಕಾರ 3 ಪ್ರಕರಣಗಳಲ್ಲಿ ಆತ ತಪ್ಪಿತಸ್ಥ ಎಂದು ಘೋಷಿಸಿತ್ತು. ಅಲ್ಲದೇ ಆತನನ್ನು ಭಾರತದಲ್ಲಿ ಸ್ವಾಗತಿಸಿ ಮೆರವಣಿಗೆ ಸಹ ನಡೆಸಲಾಗಿದೆ ಎಂದು ಮೂಲಗಳು ತಿಳಿಸಿವೆ.