ತೇಜಸ್ವಿ ಸೂರ್ಯ ಹೇಳಿಕೆಯ ಆಡಿಯೋ ವೈರಲ್ ಹಿನ್ನೆಲೆ: ಚಿಕ್ಕಮಗಳೂರು ಬಿಜೆಪಿ ಯುವ ಮೋರ್ಚಾ ಅಧ್ಯಕ್ಷನಿಗೆ ಕೊಕ್

Prasthutha|

ಚಿಕ್ಕಮಗಳೂರು: ಸುಳ್ಯದ ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆಯ ಬಳಿಕ ಬಿಜೆಪಿ ಪದಾಧಿಕಾರಿಗಳು ರಾಜೀನಾಮೆ ಪರ್ವ ಆರಂಭಿಸಿದ್ದರು. ಅದರಂತೆ ಚಿಕ್ಕಮಗಳೂರು ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಕೂಡ ರಾಜೀನಾಮೆಗೆ ಮುಂದಾಗಿದ್ದರು. ಈ ವೇಳೆ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರು ಚಿಕ್ಕಮಗಳೂರು ಯುವ ಮೋರ್ಚಾ ಅಧ್ಯಕ್ಷ ಸಂದೀಪ್ ಜೊತೆ ಮಾತುಕತೆ ನಡೆಸಿದ್ದರು. ಅವರ ಸಂಭಾಷಣೆ ಆಡಿಯೋ ವೈರಲ್ ಆಗಿತ್ತು.

- Advertisement -


ಇದರಿಂದ ಮುಜುಗರಕ್ಕೀಡಾದ ತೇಜಸ್ವಿ ಸೂರ್ಯ ಒತ್ತಡ ತಂದು ಚಿಕ್ಕಮಗಳೂರು ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷರನ್ನು ಬದಲಾವಣೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಸಂಭಾಷಣೆಯ ವೇಳೆ ಕಾಂಗ್ರೆಸ್ ಸರ್ಕಾರವಿದ್ದಿದ್ದರೇ ಬೀದಿಯಲ್ಲಿ ಕಲ್ಲು ಹೊಡೆಯಬಹುದಿತ್ತು. ಆದರೆ ಏನು ಮಾಡುವುದು ನಮ್ಮ ಸರ್ಕಾರವೇ ಇದೆಯಲ್ಲಾ ಎಂದು ಬಿಜೆಪಿ ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ಹಾಗೂ ಸಂಸದ ತೇಜಸ್ವಿ ಸೂರ್ಯ ಹೇಳಿರುವುದು ಭಾರಿ ವೈರಲ್ ಆಗಿತ್ತು.


ಪ್ರವೀಣ್ ನೆಟ್ಟಾರ್ ಹತ್ಯೆಯಿಂದ ಬೇಸತ್ತು ಚಿಕ್ಕಮಗಳೂರು ಜಿಲ್ಲಾ ಯುವ ಮೋರ್ಚಾದ ಮಂಡಲದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಸಾಮೂಹಿಕ ರಾಜೀನಾಮೆ ನೀಡಿದ್ದರು. ರಾಜ್ಯದಲ್ಲಿ ಹಿಂದೂಗಳ ಹತ್ಯೆ ಪ್ರಕರಣ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಪ್ರತಿ ಬಾರಿ ಹತ್ಯೆಯಾದಗಲೂ ಸರ್ಕಾರ ಕಠಿಣ ಕ್ರಮಕೈಗೊಳ್ಳುತ್ತೇವೆ ಎಂದು ನೀಡುತ್ತಿರುವ ಭರವಸೆ ಬರೀ ಭರವಸೆಯಾಗಿ ಉಳಿಯುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.
ಈ ಆಡಿಯೋ ವೈರಲ್ ವಿಚಾರ ಬಿಜೆಪಿಗೆ ಹಾಗೂ ರಾಜ್ಯ ಸರಕಾರಕ್ಕೆ ಮುಜುಗರ ತಂದಿತ್ತು. ಸಿದ್ದರಾಮಯ್ಯ ಸೇರಿ ಹಲವರು ಸೇರಿ ಟ್ವೀಟ್ ಮಾಡಿ ಬಿಜೆಪಿ ಮತ್ತು ಬಿಜೆಪಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಚಿಕ್ಕಮಗಳೂರು ಬಿಜೆಪಿ ಜಿಲ್ಲಾಧ್ಯಕ್ಷ ಕಲ್ಮರುಡಪ್ಪ ಅವರ ಆದೇಶದಂತೆ ಸಂದೀಪ್ ಅವರನ್ನು ಜಿಲ್ಲಾ ಯುವ ಮೋರ್ಚಾ ಸ್ಥಾನದಿಂದ ಕೆಳಗಿಳಿಸಿ ಆ ಸ್ಥಾನಕ್ಕೆ ಸಂತೋಷ್ ಕೊಟ್ಯಾನ್ ಎಂಬವರನ್ನು ನೇಮಕ ಮಾಡಲಾಗಿದೆ.

- Advertisement -


ಈ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಸಂದೀಪ್ ಅವರು, ಸಾಮೂಹಿಕ ನಾಯಕರ ಆಯ್ಕೆ ನನ್ನದಾಗಿತ್ತು ! ಪ್ಲಾನ್ ಮಾಡಿ ರಾಜೀನಾಮೆ ಕೊಡಿಸಿ ಪಕ್ಷಕ್ಕೆ ಮುಜುಗರ ಮಾಡಿ ರಾಜಕೀಯ ಮಾಡಿ ಆಡಿಯೋ ವೈರಲ್ ಮಾಡಿದವರ ಮೇಲುಗೈ ಆಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.



Join Whatsapp