►ಶಿಕ್ಷಣ ಸಚಿವ ನಾಗೇಶ್ ರನ್ನು ಬೇರೆ ಇಲಾಖೆಗೆ ವರ್ಗಾವಣೆ ಮಾಡಲು ಆಗ್ರಹ
ಬೆಂಗಳೂರು: ಪಠ್ಯಪುಸ್ತಕಗಳಲ್ಲಿ ಜನಾಂಗೀಯ ದ್ವೇಷ ಹುಟ್ಟಿಹಾಕುವ ಪ್ರಯತ್ನ ನಡೆಯುತ್ತಿದ್ದು, ಇದರ ವಿರುದ್ಧ ಪ್ರಜ್ಞಾವಂತರು ಧ್ವನಿ ಎತ್ತಬೇಕು ಎಂದು ರಾಜ್ಯಸಭಾ ಸದಸ್ಯ ಎಲ್.ಹನುಮಂತಯ್ಯ ಮನವಿ ಮಾಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಠ್ಯ ಪುಸ್ತಕಗಳ ರಚನೆ, ಪರಿಷ್ಕರಣೆ ವಿಚಾರ ವಿಷಯ ತಜ್ಞರಿಗೆ ಬಿಡಬೇಕು. ಪಕ್ಷಗಳು ಇದಕ್ಕೆ ಹಸ್ತಕ್ಷೇಪ ಮಾಡಬಾರದು. ಅವರು ಕೇವಲ ಚರಿತ್ರೆಯನ್ನು ಮಾತ್ರ ತಮ್ಮ ಮೂಗಿನ ನೇರಕ್ಕೆ ಬರೆಯುತ್ತಿದ್ದಾರೆ.
ಕಾಂಗ್ರೆಸ್ ಸುಮಾರು 50 ವರ್ಷಕ್ಕಿಂತ ಹೆಚ್ಚು ಕಾಲ ಆಡಳಿತ ಮಾಡಿದೆ. ಯಾರ ಕಾಲದಲ್ಲೂ ಪಠ್ಯ ಪುಸ್ತಕಗಳು ವಿವಾದದ ಕೇಂದ್ರ ಬಿಂದುವಾಗಿರಲಿಲ್ಲ. ಬಿಜೆಪಿ ಬಂದ ನಂತರ ವಿವಾದ ಸೃಷ್ಟಿಯಾಗಲು ಏನು ಕಾರಣ? ಎಂದು ಪ್ರಶ್ನಿಸಿದ ಅವರು, ಟಿಪ್ಪು, ಹೈದರಾಲಿ ವಿರುದ್ಧ ತಪ್ಪು ದೂಷಣೆ ಮೂಲಕ ಅಪಪ್ರಚಾರ ನಡೆಸಲಾಗುತ್ತಿದೆ. ಇವರ ಹೊರತಾಗಿ ರಾಜ್ಯದ ಇತಿಹಾಸವಿರುವುದಿಲ್ಲ. ಮಕ್ಕಳಿಗೆ ರಾಜ್ಯ, ದೇಶ ಹಾಗೂ ಪ್ರಪಂಚದ ಚರಿತ್ರೆ ಕಲಿಸಬೇಕು. ಒಂದು ಜನಾಂಗದ ಮೇಲೆ ತಪ್ಪು ಸಂದೇಶ ನೀಡುವ ವಿಚಾರ ಸೇರಿಸಬಾರದು ಎಂದು ಹೇಳಿದರು.
ಈ ಪಠ್ಯ ಪುಸ್ತಕ ಪರಿಷ್ಕಕರಣಾ ಸಮಿತಿ ಏಕಮುಖವಾಗಿದ್ದು, ಆರ್ ಎಸ್ಎಸ್ ಚಿಂತನೆ ಇರುವವರ ಸಮಿತಿಯಾಗಿದೆ. ಈ ವಿಚಾರವನ್ನು ವಿಷಯ ತಜ್ಞರಿಗೆ ಬಿಟ್ಟು, ಸರ್ಕಾರ ಈ ವಿವಾದಕ್ಕೆ ತೆರೆ ಎಳೆಯಬೇಕು ಎಂದು ಹನುಮಂತಯ್ಯ ಹೇಳಿದರು.
ಶಾಲೆ ಆರಂಭವಾಗಿದ್ದು, ಮಕ್ಕಳು ಓದುವ ವಿಚಾರವನ್ನು ವಿವಾದ ಮಾಡಿ ಅವರ ಭವಿಷ್ಯದ ಜತೆ ಆಟವಾಡಬಾರದು. ಮುಖ್ಯಮಂತ್ರಿಗಳು ಮಧ್ಯಪ್ರವೇಶಿಸಿ, ಹಿಂದಿನ ವರ್ಷದ ಪುಸ್ತಕ ಮುಂದುವರಿಸಬೇಕು ಎಂದು ಆಗ್ರಹಿಸಿದರು.
ಶಿಕ್ಷಣ ಸಚಿವ ನಾಗೇಶ್ ಅವರನ್ನು ಬೇರೆ ಇಲಾಖೆಗೆ ವರ್ಗಾವಣೆ ಮಾಡಬೇಕು. ಇದೇ ಇಲಾಖೆಯಲ್ಲಿ ನಿಕಟಪೂರ್ವ ಸಚಿವರಾದ ಸುರೇಶ್ ಕುಮಾರ್ ಅವರು ಆರ್ ಎಸ್ಎಸ್ ಮೂಲದವರಾದರೂ ಇಷ್ಟು ಬೇಜವಾಬ್ದಾರಿಯಿಂದ ಮಾತನಾಡಿರಲಿಲ್ಲ. ಹೀಗಾಗಿ ನಾಗೇಶ್ ಅವರನ್ನು ಬೇರೆ ಖಾತೆ ನೀಡಬೇಕು ಎಂದು ಆಗ್ರಹಿಸಿದರು.
ದೇವನೂರು ಮಹದೇವ್, ಡಾ.ಜಿ ರಾಮಕೃಷ್ಣ ಅವರು ತಮ್ಮ ಲೇಖನ ಪ್ರಕಟಿಸಬಾರದು ಎಂದು ಹೇಳುತ್ತಿದ್ದಾರೆ. ಇದೀ ರೀತಿ ಎಲ್ಲರೂ ಕೇಳಿದರೆ ಸರ್ಕಾರ ಯಾವ ಪಠ್ಯ ಓದಿಸುತ್ತಾರೆ. ಈ ಅನಿಶ್ಚಿತತೆಗೆ ಸರ್ಕಾರವೇ ಜವಾಬ್ದಾರಿ.
ಈ ಹಿಂದಿನ ಶಿಕ್ಷಣ ಸಚಿವ ವಿಶ್ವನಾಥ್ ಅವರೇ ಇದು ಅವಿವೇಕದ ನಿರ್ಣಯ ಎನ್ನುತ್ತಿದ್ದಾರೆ. ಬಿಜೆಪಿ ನಾಯಕರೇ ಖಾಸಗಿಯಾಗಿ ಖಂಡಿಸುತ್ತಿದ್ದಾರೆ. ಪರಿಷ್ಕರಣೆ ಅಗತ್ಯವಿರಲಿಲ್ಲ, ಮಾಡಲೇಬೇಕಾಗಿದ್ದರೆ ಆ ವಿಷಯದ ತಜ್ಞರನ್ನು ನೇಮಿಸಬೇಕಿತ್ತು. ವಿಷಯ ತಜ್ಞರಲ್ಲದ ಉಡಾಳರನ್ನು ನೇಮಿಸಬಾರದಿತ್ತು ಎಂದು ಹನುಮಂತಯ್ಯ ಹೇಳಿದರು.