ಶಿವಮೊಗ್ಗ: ಬಾರ್ ಕ್ಯಾಷಿಯರ್ ಮರ್ಡರ್ ಕೇಸ್ಗೆ ಸಂಬಂಧಿಸಿದಂತೆ ಕೊಲೆ ಆರೋಪಿ ಬಂಧಿಸಲು ತೆರಳಿದ್ದ ಪೊಲೀಸರ ಮೇಲೆ ಚಾಕುವಿನಿಂದ ಹಲ್ಲೆಗೆ ಯತ್ನಿಸಿದ್ದು, ಕಾಲಿಗೆ ಫೈರಿಂಗ್ ಮಾಡಿ ಆರೋಪಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಸತೀಶ್ ಬಂಧಿತ ಆರೋಪಿ. ಶಿವಮೊಗ್ಗ ತಾಲ್ಲೂಕಿನ ಆಯನೂರಿನಲ್ಲಿ ಬಾರ್ ಕ್ಯಾಷಿಯರ್ ಸಚಿನ್ ಮರ್ಡರ್ ಕೇಸ್ ಸಂಬಂಧ ಅರೆಸ್ಟ್ ಮಾಡಲಾಗಿದೆ. ಪಿಎಸ್‌ಐ ಎಸ್ ರಾಜು ರೆಡ್ಡಿ ಸ್ವಯಂ ರಕ್ಷಣೆ ಹಿನ್ನಲೆ ಆರೋಪಿ ಕಾಲಿಗೆ ಫೈರಿಂಗ್ ಮಾಡಿದ್ದಾರೆ.
ಗಾಯಾಳು ಸತೀಶ್ ನನ್ನು ಚಿಕಿತ್ಸೆಗಾಗಿ ಶಿವಮೊಗ್ಗ ಮೆಗ್ಗಾನ್ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯಲ್ಲಿ ಪೊಲೀಸ್ ಸಿಬ್ಬಂದಿ ಪ್ರವೀಣ್ ಮತ್ತು ಶಿವರಾಜ್ಗೆ ಗಾಯಗಳಾಗಿದ್ದು, ಅವರನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಘಟನೆ ಹಿನ್ನಲೆ
ಮದ್ಯ ನೀಡಲು ನಿರಾಕರಿಸಿದ್ದಕ್ಕೆ ಬಾರ್ ಕ್ಯಾಶಿಯರ್ ಸಚಿನ್ ನನ್ನು ಮೂವರು ದುಷ್ಕರ್ಮಿಗಳು ಹತ್ಯೆ ಮಾಡಿದ್ದಾರೆ. ನಿನ್ನೆ (ಜೂ.05) ಬಾರ್ಗೆ ಗಾಂಜಾ ಅಮಲಿನಲ್ಲಿ ಬಂದ ಮೂವರು ಮದ್ಯ ಕೇಳಿದ್ದಾರೆ. ಅದಕ್ಕೆ ಕ್ಯಾಶಿಯರ್ ಸಚಿನ್ ಸಮಯ ಮುಗಿದಿದೆ ಮದ್ಯ ನೀಡಲು ಆಗುವುದಿಲ್ಲ ಎಂದಿದ್ದಾನೆ. ಇದರಿಂದ ಸಿಟ್ಟಿಗೆದ್ದ ಮೂವರು ಗಲಾಟೆ ಮಾಡಿದ್ದಾರೆ.
ನಂತರ ಡ್ರ್ಯಾಗರ್ ನಿಂದ ದುಷ್ಕರ್ಮಿಗಳು ಕ್ಯಾಶಿಯರ್ ಮೇಲೆ ಹಲ್ಲೆ ಮಾಡಿ ಪರಾರಿಯಾಗಿದ್ದಾರೆ. ಅಲ್ಲದೇ ಆರೋಪಿಗಳು ಬಾರ್ ಸನಿಹ ಗಸ್ತಿಗೆ ನೀಯೋಜಿಸಿದ್ದ ಪೊಲೀಸರ ಮೇಲೂ ಹಲ್ಲೆಗೆ ಯತ್ನಿಸಿದ್ದಾರೆ ಎಂದು ತಿಳಿದುಬಂದಿದೆ.
ಗಂಭೀರಗೊಂಡಿದ್ದ ಕ್ಯಾಶಿಯರ್ ಸಚಿನ್ನನ್ನು ಸ್ಥಳೀಯರು ಕೂಡಲೇ ಶಿವಮೊಗ್ಗ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ. ಕುಂಸಿ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ದಾಖಲಿದೆ.