ಅಮಾಯಕ ಮುಸ್ಲಿಂ ಯುವಕನ ಕೊಲೆಯತ್ನ, ಶಾಂತವಾಗಿದ್ದ ಜಿಲ್ಲೆಯಲ್ಲಿ ಗಲಭೆ ಸೃಷ್ಟಿಸಲು ಸಂಘಪರಿವಾರ ಷಡ್ಯಂತ್ರ: SDPI ಆರೋಪ

Prasthutha|

ಮಂಗಳೂರು: ಸುಳ್ಯ ತಾಲೂಕಿನ ಬೆಳ್ಳಾರೆ ಸಮೀಪದ ಕಳಂಜದಲ್ಲಿ ಅಮಾಯಕ ಮುಸ್ಲಿಂ ಯುವಕನನ್ನು 10 ಮಂದಿಯಿದ್ದ ಸಂಘಪರಿವಾರದ ಗೂಂಡಾಗಳು ಕ್ಷುಲ್ಲಕ ವಿಚಾರವನ್ನು ಮುಂದಿಟ್ಟು ಮಾರಣಾಂತಿಕವಾಗಿ ಗುಂಪು ಹಲ್ಲೆ ಮಾಡಿ ಕೊಲೆಯತ್ನ ನಡೆಸಿದ ಘಟನೆಯು ಸಂಘಪರಿವಾರ ನಡೆಸಿದ ವ್ಯವಸ್ಥಿತ ಷಡ್ಯತ್ರದ ಭಾಗವಾಗಿದೆ. ಅಮಾಯಕ ಮುಸ್ಲಿಂ ಯುವಕನ ಮೇಲೆ ಮಾರಣಾಂತಿಕ ದಾಳಿ ಮಾಡುವ ಮೂಲಕ ಬಿಜೆಪಿ ಮತ್ತು ಸಂಘಪರಿವಾರವು ಶಾಂತವಾಗಿದ್ದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅರಾಜಕತೆ ನಿರ್ಮಾಣ ಮಾಡಿ ಕೋಮು ಗಲಭೆ ಸೃಷ್ಟಿಸುವ ಷಡ್ಯಂತ್ರ ನಡೆಸುತ್ತಿದೆ ಎಂದು ಎಸ್ ಡಿಪಿಐ ದಕ್ಷಿಣ ಕನ್ನಡ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅನ್ವರ್ ಸಾದತ್ ಬಜತ್ತೂರು ಆರೋಪಿಸಿದ್ದಾರೆ.

- Advertisement -

 ಈ ಬಗ್ಗೆ ಮಂಗಳೂರಿನಲ್ಲಿ ಪ್ರತಿಕ್ರಿಯಿಸಿರುವ ಅವರು, ನಿನ್ನೆ ತಡ ರಾತ್ರಿ ಯುವಕರ ಮಧ್ಯೆ ನಡೆದ ಕ್ಷುಲ್ಲಕ ವಿಚಾರವೊಂದರ ಬಗ್ಗೆ ಮಾತಿನ ಚಕಮಕಿ ನಡೆದು ನಂತರ ಆ ವಿಚಾರ ಮುಗಿದಿತ್ತು. ಆ ನಂತರ ಸಂಘಪರಿವಾರಕ್ಕೆ ಸೇರಿದ ಹತ್ತು ಮಂದಿ ದುಷ್ಕರ್ಮಿಗಳು ಪೂರ್ವಯೋಚಿತವಾಗಿ ಚರ್ಚಿಸಿ ರಾಜಿ ಪಂಚಾಯಿತಿ ಮಾಡುವ ಎಂದು ಸುಳ್ಳು ಹೇಳಿ 19 ವರ್ಷ ಪ್ರಾಯದ ಮಸೂದ್ ಎಂಬ ಯುವಕನನ್ನು ಹಾಗೂ ಆತನ ಗೆಳೆಯನನ್ನು ನಿರ್ಧರಿತ ಸ್ಥಳಕ್ಕೆ ಕರೆಸಿಕೊಂಡು ಏಕಾಏಕಿ ಇಬ್ಬರ ಮೇಲೆ ಮಾರಕಾಯುಧಗಳಿಂದ ಹಲ್ಲೆ ಮಾಡಿದ್ದಾರೆ. ಇದರಿಂದಾಗಿ ಮಸೂದ್ ತೀವ್ರ ಹಾಗೂ ಮಾರಣಾಂತಿಕ ಗಾಯಗಳಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ತುರ್ತು ನಿಗಾ ಘಟಕದಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿದ್ದಾನೆ. ಅಮಾಯಕ ಯುವಕರ ಮೇಲೆ ವಿನಾಕಾರಣ ಹಲ್ಲೆ ನಡೆಸಿ ಸಮಾಜದಲ್ಲಿ ಭಯದ ವಾತಾವರಣ ನಿರ್ಮಿಸುತ್ತಿರುವ ಸಂಘಪರಿವಾರದ ಗೂಂಡಾಗಳ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಹಾಗೂ ಈ ಘಟನೆಯ ಪಾತ್ರದಾರಿಗಳೊಂದಿಗೆ ಇದರ ಹಿಂದಿರುವ ಸೂತ್ರಧಾರಿಗಳು ಎಷ್ಟೇ ಪ್ರಬಲರಾದರೂ ಅವರನ್ನು ಪೊಲೀಸ್ ಇಲಾಖೆ ಕಾನೂನಿನ ಕಟಕಟೆಯಲ್ಲಿ ತಂದು ನಿಲ್ಲಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

 ಇಂತಹ ವಿಚಾರಗಳನ್ನು ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಿ ಜಿಲ್ಲೆಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು. ಪೊಲೀಸ್ ಇಲಾಖೆ ಯಾವುದೇ ರೀತಿಯ ಒತ್ತಡಗಳಿಗೆ ಮಣಿಯದೆ ನಿಷ್ಪಕ್ಷಪಾತ ತನಿಖೆ ನಡೆಸಬೇಕು. ಇಲ್ಲದಿದ್ದರೆ ಪಕ್ಷದ ವತಿಯಿಂದ ಜಿಲ್ಲಾದ್ಯಂತ ತೀವ್ರ ರೀತಿಯ ಹೋರಾಟ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ

Join Whatsapp